ಉಡುಪಿ, ಜ.06 (Daijiworld News/PY) : ಪರ್ಯಾಯ ಪಲಿಮಾರು ಸ್ವಾಮೀಜಿ ಅವರ ಪೂಜಾಧಿಕಾರ ಮುಗಿಯಲು ಇನ್ನೇನು ಎರಡು ವಾರ ಇರುವಾಗಲೇ ಪರ್ಯಾಯ ಪಲಿಮಾರು ಮಠ, ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ ಗೋಧೂಳಿ ಸಮಯದಲ್ಲಿ ಶ್ರೀಕೃಷ್ಣ ಮಠದ ಉತ್ಸವ ಮೂರ್ತಿಗೆ ತುಲಾಭಾರ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು.
ಒಂದು ತೊಲ ಬಂಗಾರ ನೀಡಿದ ಭಕ್ತರು ತಾವೇ ಸ್ವತಃ ಆ ಬಂಗಾರದ ತಕ್ಕಡಿಯಲ್ಲಿ ಸಮರ್ಪಿಸಿದರು. ರಥ ಬೀದಿಯಲ್ಲಿ ಹಾಕಿದ್ದ ಸುಧರ್ಮ ವೇದಿಕೆಯಲ್ಲಿ ಶ್ರೀಕೃಷ್ಣನಿಗೆ ನಡೆದ ತುಲಾಭಾರ ಮಹೋತ್ಸವವನ್ನು ಸಾವಿರಾರು ಭಕ್ತಾಧಿಗಳು ಕಣ್ತುಂಬಿಸಿಕೊಂಡರು.
ಸ್ವರ್ಣ ತುಲಾಭಾರಕ್ಕೂ ಮುನ್ನ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿದ ಅವರು, "ನಮ್ಮೆಲ್ಲರ ನೋವು ನಲಿವಿನ ಭಾರವನ್ನು ಬೇರೆಯವರ ಮೇಲೆ ಹಾಕದೇ ಶ್ರೀಕೃಷ್ಣನಿಗೆ ಅರ್ಪಿಸಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು, ಇಲ್ಲಿ ನಾವು ಕೇವಲ ಮಾಧ್ಯಮವಷ್ಟೇ, ಎಲ್ಲಾ ಭಕ್ತರು ಪ್ರೀತಿಯಿಂದ ನೀಡಿರುವ ಕಾಣಿಕೆಯನ್ನು ದೇವರಿಗೆ ಸಮರ್ಪಿಸುತ್ತೇವೆ" ಎಂದು ತಿಳಿಸಿದರು.
ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, "ಶ್ರೀಕೃಷ್ಣನಿಗೆ ಪ್ರಿಯವಾದುದೆಂದರೆ ಅದು ತುಳಸಿ ದಳ, ಪರ್ಯಾಯ ಪಲಿಮಾರು ಶ್ರೀಗಳು 2 ವರ್ಷಗಳಲ್ಲಿ ಕೋಟ್ಯಂತರ ತುಳಸಿ ದಳವನ್ನು ಸಮರ್ಪಣೆ ಮಾಡಿದ್ದಾರೆ" ಎಂದರು.
ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, "ಭಗವಂತನ ಭಾರಕ್ಕೆ ತುಲನೆ ಎನ್ನುವುದಿಲ್ಲ, ದೇವರ ಮಹಿಮೆ ಅಪಾರವಾದದ್ದು, ಭಕ್ತಿಯಿಂದ ನಾವೆಲ್ಲರೂ ಶ್ರೀಕೃಷ್ಣನ್ನು ಆರಾಧಿಸಬೇಕು" ಎಂದರು.
ಮಹೋತ್ಸವದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಬಾಳೆಗಾರು ಮಠಾಧೀಶ ಶ್ರೀರಘು ಭೂಷಣ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ಶ್ರೀಪಾದರು ಉಪಸ್ಥಿತರಿದ್ದರು.