ಕುಂದಾಪುರ: ಜ 06 (Daijiworld News/MSP): ರೈತ ಬೆಳೆದ ಕೃಷಿ ಉತ್ಪನ್ನವನ್ನು ತಾನೇ ನೇರ ಮಾರುಕಟ್ಟೆ ಮಾಡಿದರೆ ರೈತ-ಗ್ರಾಹಕ ಇಬ್ಬರಿಗೂ ಒಳ್ಳೆಯದು. ಆದರೆ ಇತ್ತೀಚೆಗೆ ಮಧ್ಯವರ್ತಿಗಳ ಹಾವಳಿಯೇ ಜಾಸ್ತಿ. ಬೆಳೆದವನಿಗಿಂತ ಮಧ್ಯವರ್ತಿಗಳೇ ಹೆಚ್ಚು ಗಳಿಕೆ ಮಾಡಿಕೊಳ್ಳುತ್ತಾರೆ. ಇದರಿಂದ ಗ್ರಾಹಕರ ಜೇಬಿಗೂ ಭಾರ. ಆದರೆ ಕುಂಭಾಸಿ ಗ್ರಾ.ಪಂ ವ್ಯಾಪ್ತಿಯ ಕೊರವಡಿಯ ಯುವ ಕೃಷಿಕ ರಾಜೇಶ ಅವರ ವಿಚಾರಧಾರೆಯೇ ಬೇರೆ. ಅವರು ಬೆಳೆದ ಉತ್ಪನ್ನವನ್ನು ತಾನೇ ಸಂತೆಯಲ್ಲಿ ನೇರ ಗ್ರಾಹಕರಿಗೇ ಮಾರಾಟ ಮಾಡುತ್ತಾರೆ. ತಾಜಾ ತಾಜಾ ತರಕಾರಿ ಸೊಪ್ಪುಗಳನ್ನು ನೇರ ಗ್ರಾಹಕರಿಗೆ ಗ್ರಾಹಕರ ಜೇಬಿಗೆ ಭಾರವಾಗದ ದರದಲ್ಲಿ ವಿಕ್ರಯಿಸುತ್ತಾರೆ.
ಕೊರವಡಿಯ ಸದಿಯನಮನೆಯ ರಾಜೇಶ ಕಾಂಚನ್ ವಿದ್ಯಾವಂತ ಯುವಕ. ಕೃಷಿಯ ಬಗ್ಗೆ ವಿಪರೀತ ಆಸಕ್ತಿ, ಹೊಸತನವನ್ನು ಕೃಷಿಯಲ್ಲಿ ಅಳವಡಿಸುವ ಚಿಂತನೆಯಿಂದ ರಾಜೇಶ ಕೃಷಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡರು. ಪಾರಂಪರಿಕವಾದ ಕೃಷಿ ಪದ್ದತಿಗೆ ಹೊಸ ತಿರುವು ನೀಡಿದರು. ವೈಜ್ಞಾನಿಕ ಹಾಗೂ ಸುಧಾರಿತ ಪದ್ದತಿಗಳ ಅಳವಡಿಸಿಕೊಂಡರು. ಸಾವಯವ ಮಾದರಿಯನ್ನು ಅವಲಂಬಿಸಿಕೊಂಡು ವರ್ಷವಿಡಿ ಕೃಷಿಯನ್ನು ಮಾಡುತ್ತಾ ಯಶಸ್ವಿ ಕೃಷಿಕರಾಗಿ ರೂಪುಗೊಂಡಿದ್ದಾರೆ.
೩ ಎಕ್ರೆ ಕೃಷಿ ಭೂಮಿಯಲ್ಲಿ ಭತ್ತ, ನೆಲಗಡಲೆ ಬೆಳೆಯುತ್ತಾರೆ. ಉಳಿದೆಡೆ ಅಡಿಕೆ, ತೆಂಗು, ಕೊಕ್ಕೊ, ಮಾವು ಮುಂತಾದ ವೈವಿಧ್ಯಮಯವಾದ ಕೃಷಿ ಇದೆ. ಇವರ ವಿಶೇಷತೆ ಇರುವುದು ತರಕಾರಿ ಕೃಷಿಯಲ್ಲಿ. ಹಡಿಲು ಭೂಮಿಯಲ್ಲಿ ವೈವಿಧ್ಯಮಯವಾದ ತರಕಾರಿ ಕೃಷಿ ಮಾಡಿ ಗಮನ ಸಳೆಯುತ್ತಾರೆ. ಮುಂಗಾರು ಹಂಗಾಮಿ ಮುಗಿಯುತ್ತಿದ್ದಂತೆ ತರಕಾರಿ ಕೃಷಿ ಆರಂಭಿಸುತ್ತಾರೆ. ಆ ಪ್ರದೇಶದ ಸಾಂಪ್ರದಾಯಿಕ ಕೃಷಿ ಪದ್ದತಿ ಮತ್ತು ಕಡಲ ತೀರದ ಉಸುಕು ಜಾಸ್ತಿ ಇರುವ ಪ್ರದೇಶಕ್ಕೆ ಒಗ್ಗುವ ತರಕಾರಿಯನ್ನು ಬೆಳೆಯುತ್ತಾರೆ. ಮುಖ್ಯವಾಗಿ ಇವರು ಬೆಳೆಯುವ ಸೊಪ್ಪು ತರಕಾರಿಗಳಿಗೆ ಒಳ್ಳೆಯ ಬೇಡಿಕೆ ಇದೆ.
ಬಸಳೆ, ಹರಿವೆಯನ್ನು ಯಥೆಚ್ಛವಾಗಿ ಬೆಳೆಯುತ್ತಾರೆ. ಕಾಳಾವರ ಹಿರಿ ಷಷ್ಠಿ ಮತ್ತು ಕಿರಿ ಷಷ್ಠಿಗೆ ಇವರ ಹರಿವೆ, ಬಸಳೆಗೆ ಒಳ್ಳೆಯ ಬೇಡಿಕೆ. ಕಾಳಾವರ ಪ್ರದೇಶದಲ್ಲಿ ಷಷ್ಠಿಯಂದು ಸಾಂಪ್ರಾದಾಯಿಕವಾದ ಆಹಾರ ಪದಾರ್ಥ ತಯಾರಿಸುವ ವಾಡಿಕೆ ಇದೆ. ಅದಕ್ಕೆ ಸ್ಥಳೀಯವಾದ ಸೊಪ್ಪು ತರಕಾರಿಗಳೆ ಬೇಕು. ಆ ಹಿನ್ನೆಲೆಯಲ್ಲಿ ರಾಜೇಶ ಸೊಪ್ಪು ಸಿದ್ಧಪಡಿಸುತ್ತಾರೆ. ರಾಸಾಯನಿಕ ಬಳಕೆ ಮಾಡದ ಸೊಪ್ಪು ತರಕಾರಿ ಇವರದ್ದು. ದಂಟಿನ ಹರಿವೆ, ಸ್ಥಳೀಯ ಬಸಳೆ ಹಾಗೂ ಹೈಬ್ರಿಡ್ ಬಸಳೆಗಳನ್ನು ಬೆಳೆದು ಮಾರಾಟ ಮಾಡುತ್ತಾರೆ. ಗ್ರಾಹಕರ ಕೈಗೆಟುಕುವ ದರದಲ್ಲಿ ಮಾರಾಟ ಮಾಡುವುದರಿಂದ ಗ್ರಾಹಕರಿಗೂ ಇಷ್ಟವಾಗುತ್ತಾರೆ.
ತರಕಾರಿಯಲ್ಲಿಯೂ ಇವರು ಆಂತರಿಕ ಬೇಸಾಯ ಪದ್ದತಿ ಅನುಸರಿಸುತ್ತಾರೆ. ತೊಂಡೆಯ ಬುಡದಲ್ಲಿ ಕೆಂಪು ಹರಿವೆ ಹಾಕುತ್ತಾರೆ. ತೊಂಡೆ ಚಿಗುರಿ ಚಪ್ಪರನ ಏರುವ ಮೊದಲು ಹರಿವೆ ಕಟಾವಿಗೆ ಬರುತ್ತದೆ. ಸಮೃದ್ದವಾದ ಸೊಪ್ಪು ಹೊಂದಿರುವ ಉತ್ಕೃಷ್ಠ ಮಟ್ಟದ ಹರಿವೆಗೆ ಒಳ್ಳೆಯ ಬೇಡಿಕೆಗೂ ಸಿಗುತ್ತದೆ. ಅದೇ ರೀತಿ ಬಸಳೆಯನ್ನು ನಾಟಿ ಮಾಡುತ್ತಾರೆ. ಬಸಳೆ ಸಾವಯವ ವಿಧಾನದಲ್ಲಿ ಸಮೃದ್ದವಾಗಿ ಬೆಳೆಯುತ್ತದೆ. ತಾಜಾ ತಾಜ ರುಚಿಕರವಾಗಿರುತ್ತದೆ. ಪಡುವಲ ಕಾಯಿ, ಸ್ಥಳೀಯ ಅಲಸಂಡೆಯನ್ನು ಬೆಳೆಸುತ್ತಾರೆ. ತೊಂಡೆ ಹಾಗೂ ಆಲಸಂಡೆ ಮೇ ಅಂತ್ಯದ ತನಕ ಇರುತ್ತದೆ. ಗೋಬರ್ ಗ್ಯಾಸ್ ಸ್ಲರಿ, ಬೂದಿ ಬಳಕೆ ಮಾಡುವುದರಿಂದ ಒಳ್ಳೆಯ ಸೊಪ್ಪು ತರಕಾರಿ ಸಿಗುತ್ತದೆ.
ರಾಜೇಶ ಕಾಂಚನ್ ಧರ್ಮಸ್ಥಳ ಗ್ರಾಮಾವೃದ್ದಿ ಯೋಜನೆ ಸೇರಿದ ನಂತರ ಕೃಷಿಯಲ್ಲಿ ಇನ್ನಷ್ಟು ಪ್ರಯೋಗಶೀಲತೆ,ಪ್ರಗತಿಶೀಲತೆ ಕಂಡುಕೊಂಡರು. ಅಧ್ಯಯನ ಪ್ರವಾಸಗಳು ಅವರಲ್ಲಿ ಸಾಕಷ್ಟು ಅನುಭವ ಕೊಟ್ಟವು.ಸುಮಾರು ೨೦ಕ್ಕೂ ಹೆಚ್ಚು ಜಿಲ್ಲೆಗಳಿಗೆ ಅವರು ಅಧ್ಯಯನ ಪ್ರವಾಸಕ್ಕೆ ಹೋಗಿದ್ದಾರೆ. ಬೇರೆ ಕೃಷಿ ವಿಧಾನಗಳನ್ನು ತಿಳಿದುಕೊಂಡಿದ್ದಾರೆ. ತೆಕ್ಕಟ್ಟೆ ಒಕ್ಕೂಟದ ನೇತ್ರಾವತಿ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಾಗಿರುವ ಇವರು, ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿಯ ಜೊತೆಯಲ್ಲಿ ಪಿಗ್ಮಿ ಸಂಗ್ರಹಕರಾಗಿಯೂ ಕೆಲಸ ಮಾಡುತ್ತಾರೆ.
ಇವರ ಪ್ರಯೋಗಶೀಲತೆಗೆ ಮೈಸೂರು ಬದನೆ ಕೃಷಿ ಮಾಡಿ ಯಶಸು ಕಂಡಿದ್ದಾರೆ. ಸೂಕ್ತ ಮಾರುಕಟ್ಟೆ ದೊರಕದೆ ನಿರಸರಾಗಿದ್ದಾರೆ. ಬ್ಯಡಗಿ ಮೆಣಸನ್ನು ಬೆಳೆದಿದ್ದಾರೆ. ಬೊನ್ಸಾಯ್ ಕೃಷಿಯನ್ನು ಮಾಡುವ ಸಂಕಲ್ಪ ಮಾಡಿದ್ದಾರೆ. ತಾರಸಿ ಕೈತೋಟವನ್ನು ಮಾಡುವ ಚಿಂತನೆ ಹೊಂದಿದ್ದಾರೆ. ಸೋಪು ಪಿನ್ಯಲ್ ತಯಾರಿಯ ತರಬೇತಿ ಪಡದಿದ್ದಾರೆ. ಮಿಶ್ರ ತಳಿಯ ಹಸುಗಳ ಸಾಕಾಣಿಕೆ ಮೂಲಕ ಹೈನುಗಾರಿಕೆಯನ್ನು ಮಾಡಿದ್ದಾರೆ.
ಕರಾವಳಿ ಭಾಗದಲ್ಲಿ ಕೊಕ್ಕೋ ಸಸಿ ನೆಟ್ಟು ಈಗ ಕೊಕ್ಕೋ ಇಳುವರಿ ಕೊಡುತ್ತಿದೆ. ಮಾವು, ಅಡಿಕೆಗೆ ಅಂತರ್ ಬೇಸಾಯವಾಗಿ ಕಾಳುಮೆಣಸು, ವೀಳ್ಯೆದೆಲೆ ಬೆಳೆಸಿದ್ದಾರೆ. ಹೈಬ್ರಿಡ್ ಬ್ರಾಹ್ಮಿ, ನಿಂಬೆ ಹುಲ್ಲು ಇತ್ಯಾದಿ ಪ್ರಯೋಗಗಳಿವೆ. ಒಟ್ಟಾರೆಯಾಗಿ ಹೊಸ ಹೊಸ ಪ್ರಯೋಗಗಳನ್ನು ಕೃಷಿಯಲ್ಲಿ ಮಾಡುವುದು ಈ ಯುವ ಕೃಷಿಕನ ಆಶಯವಾಗಿದೆ.