ಮಂಗಳೂರು, ಜ 6 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಜನಜಾಗೃತಿ ಹೆಸರಿನಲ್ಲಿ ಮಂಗಳೂರಿಗೆ ಜ 19ರಂದು ಗೃಹ ಸಚಿವ ಅಮಿತ್ ಶಾ ಬರಲಿದ್ದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, "ನಾವು ಅಮಿತ್ ಶಾ ಅವರನ್ನು ಮಂಗಳೂರಿಗೆ ಆಗಮಿಸಲು ಬಿಡುವುದಿಲ್ಲ. ಗೋಬ್ಯಾಕ್ ಅಮಿತ್ ಶಾ ಹೆಸರಿನಲ್ಲಿ ಚಳುವಳಿ ನಡೆಸುತ್ತೇವೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಮಿತ್ ಶಾ ಅವರ ಮಂಗಳೂರು ಭೇಟಿಗೆ ಅವಕಾಶ ನೀಡಬಾರದು" ಎಂದು ಒತ್ತಾಯಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಮಂಗಳೂರು ಈಗಷ್ಟೆ ಶಾಂತವಾಗುತ್ತದೆ. ಈ ಸಂದರ್ಭದಲ್ಲಿ ಅಮಿತ್ ಶಾ ಅವರು ಮಂಗಳೂರಿಗೆ ಭೇಟಿ ನೀಡುವುದರಿಂದ ಜಿಲ್ಲೆಯ ಶಾಂತಿಗೆ ಧಕ್ಕೆ ಉಂಟಾಗುತ್ತದೆ. ಆ ನಿಟ್ಟಿನಲ್ಲಿ ಅವರಿಗೆ ಮಂಗಳೂರಿಗೆ ಆಗಮಿಸಲು ಅವಕಾಶ ನೀಡಬಾರದು. ನಾವು ಗೋ ಬ್ಯಾಕ್ ಅಮಿತ್ ಶಾ ಚಳುವಳಿ ನಡೆಸುತ್ತೇವೆ. ಅವರು ತಮ್ಮ ಮಂಗಳೂರು ಭೇಟಿ ಕಾರ್ಯಕ್ರಮವನ್ನು ಮುಂದೂಡಬೇಕು" ಎಂದು ಆಗ್ರಹಿಸಿದ್ದಾರೆ.
"ಈಡೀ ಭಾರತವೇ ಮೊದಲ ಬಾರಿಗೆ ಎನ್ಆರ್ಸಿ ಹಾಗೂ ಸಿಎಎ ವಿರುದ್ಧ ಎದ್ದು ನಿಂತಿದೆ, ಆದರೂ ಕೂಡಾ ಕೇಂದ್ರ ಸರ್ಕಾರ ಈ ಎರಡು ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಮೋದಿಯವರು ಎನ್ಆರ್ಸಿ ಹಾಗೂ ಸಿಎಎಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅಮಿತ್ ಶಾ ಅವರು ಎನ್ಆರ್ಸಿ ಹಾಗೂ ಸಿಎಎ ಜಾರಿಯ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳುತ್ತಿದ್ದಾರೆ. ಈ ರೀತಿ ಇಬ್ಬರು ಬೇರೆ ಬೇರೆ ಹೇಳಿಕೆ ನೀಡಿ ಜನರಿಗೆ ಗೊಂದಲ ಮೂಡಿಸುತ್ತಿದ್ದಾರೆ" ಎಂದು ಹೇಳಿದರು.
"ಈಗ ಮೋದಿ, ಶಾ ಅವರು ಎನ್ಆರ್ಸಿ ಹಾಗೂ ಸಿಎಎ ವಿರುದ್ಧ ಮನೆಮನೆಗೆ ತೆರಳಿ ಜನಜಾಗೃತಿ ಮಾಡುತ್ತಿದ್ದಾರೆ. ಅವರು ಎಲ್ಲಾ ಧರ್ಮವನ್ನು ಸಮಾನವಾಗಿ ನೋಡುತ್ತಾರೆ ಎಂದಾದರೆ ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಯಾಕೆ ಕೈಬಿಡಲಾಗಿದೆ" ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರು ನೀಡಿದ ಹೇಳಿಕೆಯ ಬಗ್ಗೆ ಮಾತನಾಡಿದ ಅವರು, "ಅವರು ಬಿಜೆಪಿಯ ಸಿದ್ಧಾಂತ ಹಾಗೂ ಎನ್ಆರ್ಸಿ ಮತ್ತು ಸಿಎಎ ಅನುಷ್ಠಾನದ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಈ ಹೇಳಿಕೆಯನ್ನು ಸಮರ್ಥಿಸುತ್ತಿದ್ದಾರೆ. ಅವರಿಗೆ ಶಾಸಕರ ಮೇಲೆ ಕ್ರಮ ಕೈಗೊಳ್ಳುವಷ್ಟು ದೈರ್ಯವಿದ್ದರೆ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ" ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, "ಜೆಎನ್ಯುವಿನಲ್ಲಿ ನಡೆದ ಹಿಂಸಾಚಾರವನ್ನು ಕಾಂಗ್ರೆಸ್ ಖಂಡಿಸುತ್ತದೆ. ಈ ಬಗ್ಗೆ ದೆಹಲಿ ಪೊಲೀಸರು ಮೌನವಾಗಿದ್ದಾರೆ. ಈ ಹಲ್ಲೆಯನ್ನು ಎಬಿವಿಪಿ ಸಂಘಟನೆಯವರು ಮಾಡಿದ್ದಾರೆ ಎಂಬ ಆರೋಪಗಳಿವೆ" ಎಂದು ದೂರಿದರು.
"ನಾವು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತೇವೆ. ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಇದು ದೇಶ ದ್ರೋಹದ ಹೇಳಿಕೆಯಲ್ಲವೇ" ಎಂದು ಪ್ರಶ್ನೆ ಮಾಡಿದ್ದಾರೆ.