ಮಂಗಳೂರು, ಜ 7(Daijiworld News/MSP): ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಜ.07 ರಂದು ಬೆಳಗ್ಗೆ 11 ರಿಂದ 1.30 ರವರೆಗೆ ಮಂಗಳೂರಿನ ಮಿನಿವಿಧಾನ ಸೌಧದ ಎರಡನೇ ಮಹಡಿಯಲ್ಲಿರುವ ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸಲಿದ್ದಾರೆ.
ಗಲಭೆ ಕುರಿತು ಮಾಹಿತಿ ಉಳ್ಳವರು, ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದವರು ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆ ನೀಡಬಹುದು ಎಂದು ಜಿ. ಜಗದೀಶ್ ಮನವಿ ಮಾಡಿದ್ದಾರೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲು ನಡೆದ ಪ್ರತಿಭಟನೆ ವೇಳೆ ಗುಂಡೇಟಿಗೆ ನೌಶೀನ್ ಹಾಗೂ ಜಲೀಲ್ ಕುದ್ರೋಳಿ ಎಂಬವರು ಮೃತಪಟ್ಟ ಹಿನ್ನಲೆಯಲ್ಲಿ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಉಡುಪಿ ಜಿಲ್ಲೆಯ ಜಿಲ್ಲಾ ದಂಡಾಧಿಕಾರಿ ಮತ್ತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಸರ್ಕಾರ ಡಿ.೨೩ ರಂದು ನೇಮಕ ಮಾಡಿ ಆದೇಶ ಹೊರಡಿಸಿತ್ತು. ತನಿಖೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿ ಜಗದೀಶ್ ಅವರು ಕಚೇರಿ ಬಳಿಯಿಂದ ಸ್ಟೇಟ್ ಬ್ಯಾಂಕ್ ಪರಿಸರ ಬಳಿ, ನೆಲ್ಲಿಕಾಯಿ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.