ಸುಳ್ಯ, ಜ 7 (Daijiworld News/MSP): ಪಶ್ಚಿಮ ಘಟ್ಟದ ತಪ್ಪಲಿನ ಮಡಪ್ಪಾಡಿಯ ಹಾಡಿಕಲ್ಲು, ಜೀರಮಕ್ಕಿ ಮೊದಲಾದ ಮಳೆಕಾಡುಗಳ ನಡುವೆ ಆನೆ,ಪಟ್ಟೆ ಹುಲಿ,ಕಾಡು ಹಂದಿ , ನವಿಲು,ಮಂಗ,ಕಡವೆ ಇವುಗಳ ನಡುವೆ ವನ್ಯಜೀವಿಗಳಿಂದ ತಾವು ಬೆಳೆದ ಬೆಳೆಗಳನ್ನು ರಕ್ಷಿಸುವ ಹೊಣೆಗಾರಿಕೆಯ ನಡುವೆ,ಜೀವ ರಕ್ಷಣೆಯ ಸವಾಲುಗಳನ್ನುದುರಿಸಿ ಸಂಘರ್ಷ ಗಳ ನಡುವೆ ಬದುಕುತ್ತಿರುವ ಊರಿನ ಹಿರಿಯರು ತಮ್ಮ ಬದುಕಿನ ಅನುಭವಗ ಳನ್ನು ಪತ್ರಕರ್ತರ ಗ್ರಾಮವಾಸ್ತವ್ಯದ ಹಿರಿಯರೊಂದಿಗೆ ಚಾವಡಿ ಚರ್ಚೆ,ಸಂವಾದ ಕಾರ್ಯಕ್ರಮದಲ್ಲಿ ತೆರೆದಿಟ್ಟರು.
ಸುಮಾರು ಅರ್ಧ ಶತಮಾನ ದ ಹಿಂದೆ ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿನ ಜನ ಜೀವನ ಹೇಗಿತ್ತು?ಮೂಲಭೂತ ಸೌಕರ್ಯಗಳು ಹೇಗಿತ್ತು?ಜನರು ಹೇಗೆ ಜೀವನ ಸಾಗಿಸಿದ್ದರು ಎಂಬ ಚಿತ್ರಣವನ್ನು ಹಾಡಿಕಲ್ಲಿನ ಹಿರಿಯರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪರಿಸರ, ಕೃಷಿ, ಕಾಡು, ಕಾಡು ಪ್ರಾಣಿಗಳ ಜೊತೆ ಸೆಣಸಾಡಿ ಬದುಕು ಕಟ್ಟಿಕೊಂಡ ರೀತಿಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದರು. ಹಿರಿಯರ ಬದುಕಿನ ಚಿತ್ರಣ ಹೊಸ ತಲೆಮಾರಿನ ಕಲ್ಪನೆಗೂ ನಿಲುಕದಷ್ಟು ರೋಮಾಂಚನಕಾರಿ ಘಟನೆಗಳನ್ನು ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿನಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಡೆದ ಚಾವಡಿ ಚರ್ಚೆಯಲ್ಲಿ ಹಿರಿಯರು ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿದರು. ಹಿರಿಯರಾದ ಶಿವಣ್ಣ ಗೌಡ, ಜಯರಾಮ ಗೌಡ ಜೀರ್ಮುಕಿ, ಪದ್ಮಯ್ಯ ಮಲೆ, ಚೆನ್ನಕೇಶವ ಗೌಡ ವಾಲ್ತಾಜೆ, ಮೋನಪ್ಪ ಗೌಡ ಹಾಡಿಕಲ್ಲು, ಮಡಪ್ಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಿರಿಯರಾದ ಎನ್.ಟಿ.ಹೊನ್ನಪ್ಪ ತಮ್ಮ ಅನುಭವಗಳನ್ನು ವಿವರಿಸಿದರು. 50 ವರ್ಷದ ಹಿಂದೆ ರಸ್ತೆ, ವಿದ್ಯುತ್, ವಾಹನ ಸೌಕರ್ಯಗಳು ಕನಸಿನ ಮಾತು. ತಮ್ಮ ಅಗತ್ಯ ವಸ್ತುಗಳಿಗೆ ಸುಮಾರು 18 ಕಿಮಿ. ದೂರದ ಗುತ್ತಿಗಾರಿಗೆ ನಡೆದುಕೊಂಡೇ ಹೋಗಬೇಕಿತ್ತು. ಕಾಡಿನ ಮಧ್ಯೆ ಕಾಲು ದಾರಿ ಮಾತ್ರ ಇತ್ತು. ಎಲ್ಲಿ ಹೋದರೂ ಸಂಜೆ ನಾಲ್ಕು ಗಂಟೆಯ ಮೊದಲು ಮನೆ ಸೇರಬೇಕಿತ್ತು.ತಾವು ಬೆಳೆದ ಉತ್ಪನ್ನಗಳನ್ನು ತಲೆಯಲ್ಲಿ ಹೊತ್ತು ಕೊಂಡು ಗುತ್ತಿಗಾರಿಗೆ ಕೊಂಡೊಯ್ದು ಮಾರಾಟ ಮಾಡಿ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿ ತಲೆಯಲ್ಲಿಯೇ ಹೊತ್ತು ತರಬೇಕಿತ್ತು. ಭತ್ತದ ಕೃಷಿಯೇ ಜೀವನಾಧಾರವಾಗಿತ್ತು. ಆರೋಗ್ಯ ಕೆಟ್ಟರೆ ಹಳ್ಳಿ ಮದ್ದು ಮಾಡುತ್ತಿದ್ದರು. ಇನ್ನೂ ಅಸೌಖ್ಯ ಹೆಚ್ಚಾದರೆ ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿಸಬೇಕಿತ್ತು. ಮಕ್ಕಳು ಕಿಲೋಮೀಟರ್ ಗಟ್ಟಲೆ ಬರಿಗಾಲಿನಲ್ಲಿ ನಡೆದುಕೊಂಡು ಮಡಪ್ಪಾಡಿ ಶಾಲೆಗೆ ಹೋಗುತ್ತಿದ್ದರು. ಕಾಡು ಪ್ರಾಣಿಗಳ ಬೇಟೆ ನಿಷೇದ ಇಲ್ಲದ ಕಾಲದಲ್ಲಿ ಬೇಟೆಯೂ ಜೀವನದ ಭಾಗವಾಗಿತ್ತು. ಕೆಲವೊಂದು ಹಬ್ಬದ ಸಂದರ್ಭದಲ್ಲಿ, ಬೇಸಾಯ ಮುಗಿದ ಬಳಿಕ ಬೇಟೆ ಮಾಡುತ್ತಿದ್ದರು. ತಮ್ಮ ಕೃಷಿ ಭೂಮಿಗೆ ಬರುತ್ತಿದ್ದ ಕಾಡು ಪ್ರಾಣಿಗಳ ಉಪಟಳ ತಡೆಯಲು ಕೂಡ ಬೇಟೆ ಅನಿವಾರ್ಯವಾಗಿತ್ತು. ಮನೋರಂಜನೆಗಾಗಿ ಕಬಡ್ಡಿ, ಲಗೋರಿ ಆಡುತ್ತಿದ್ದರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕೋಳಿ ಕಟ್ಟವೂ ನಡೆಯುತ್ತಿತ್ತು. ಅವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದು ಕುಟುಂಬಸ್ಥರೆಲ್ಲರೂ ಕೂಡಿ ಬಾಳುತ್ತಿದ್ದರು. ಕಂದ್ರಪ್ಪಾಡಿ ಜಾತ್ರೋತ್ಸವ ಸಂದರ್ಭದಲ್ಲಿ ನಾಡಿಗೆ ನಾಡೇ ಸಂಭ್ರಮಿಸುತ್ತಿತ್ತು ಹೀಗೆ ಒಂದೊಂದೇ ಅನುಭವಗಳನ್ನು ಹೇಳುತ್ತಿದ್ದರು. ಊರಿಗೆ ಊರೇ ಪರಸ್ಪರ ಪ್ರೀತಿ ಸೌಹಾರ್ಧತೆಯಿಂದ ಬದುಕುತ್ತಿದ್ದರು ಎಂದು ಅವರು ಬೊಟ್ಟು ಮಾಡಿದರು.ಚಾವಡಿ ಚರ್ಚೆಯಲ್ಲಿ ಹಿರಿಯರು ತಮ್ಮ ಅನುಭವಗಳನ್ನು ಹೇಳುವುದರ ಜೊತೆಗೆ ಜಾನಪದ ಹಾಡುಗಳು, ಪಾಡ್ದನಗಳನ್ನು ಹೇಳಿ ಸಂಭ್ರಮಿಸಿದರು.
ತೆಂಗಿನ ತೋಟ ನಾಶ ಮಾಡಿದ ಆನೆಗಳ ಹಿಂಡು: ನಾನು ಚಿಕ್ಕದಿರುವಾಗ ನಡೆದ ಘಟನೆ ನಮ್ಮ ಜಮೀನನಲ್ಲಿದ್ದ ಬೆಳೆದು ನಿಂತಿದ್ದ 18 ತೆಂಗಿನ ಮರಗಳಲ್ಲಿ 27 ತೆಂಗಿನ ಮರಗಳನ್ನು ಒಂದೇ ದಿನ ಆನೆಗಳ ಹಿಂಡು ನಾಶ ಮಾಡಿದೆ. ಆಗ ನನ್ನ ತಂದೆ ಅಲ್ಲಿ ಕಾವಲು ಕಾಯು ತ್ತಿದ್ದರು. ಒಂದೆ ದಿನ ಹಟ್ಟಿಯಲ್ಲಿದ್ದ ನಾಲ್ಕು ದನಗಳನ್ನು ಹುಲಿ ಕೊಂದು ಹಾಕಿರುವುದನ್ನು ನಮ್ಮ ಹಿರಿಯರು ಹೇಳುತ್ತಿದ್ದರು.ಎರಡು ವರ್ಷಗಳ ಹಿಂದೆ ನಮ್ಮ ರಬ್ಬರ್ ತೋಟಕ್ಕೆ ನಕ್ಸಲರು ಬಂದಿದ್ದರು.ಅವರು ಯಾರು ಎಂದು ನಮಗೆ ಗೊತ್ತಿರಲಿಲ್ಲ ಬಳಿಕ ನಮ್ಮನ್ನು ಸಂಪರ್ಕಿಸಿದ ಪೊಲೀಸರಿಂದ ಅವರು ನಕ್ಸಲ್'ರು ಎನ್ನುವುದು ಗೊತ್ತಾಯಿತು. ನಾವು ಶಾಲೆಗೆ ಹೋಗುವಾಗ ಬರಿಕಾಲಲ್ಲೇ ನಡೆದು ಹೋಗಬೇಕಿತ್ತು. ಕಾಲಿನ ಉಗುರು ಕಿತ್ತು ಹೋಗಿದೆ. ಜನರ ಬಳಿ ಹಣ ಕಡಿನೆ ಇತ್ತು ,ಬಡತನ ಇತ್ತು ಆದರೆ ಈಗಿನ ದಿನಗಳಿಗಿಂತ ಹೆಚ್ಚು ನೆಮ್ಮದಿ ಇತ್ತು ಎಂದು ಜಯರಾಮ ಹಾಡಿಕಲ್ಲು ತಮ್ಮ ಅನುಭವ ಹೇಳಿಕೊಂಡರು.ಯಾರಾದರೂ ಅಸೌಖ್ಯಕ್ಕೆ ಈಡಾದರೆ ಅವರನ್ನು ಇಲ್ಲಿಂದು ಹೊತ್ತು ನಾಲ್ಕು ಐದು ಮೈಲು ದೂರದ ಆಸ್ಪತ್ರೆ ಗೆ ಸಾಗಿಬೇಕಿತ್ತು.ಬಳಿಕ ಮರಸಾಗಾಟ ಮಾಡಲು ಇಲ್ಲಿ ರಸ್ತೆ ಆಯಿತು.ಈಗ ಕೆಲವರ ಬಳಿ ಖಾಸಗಿ ವಾಹನ ಇದೆ.ಅದೇ ನಮಗೆ ಸಂಚಾರಕ್ಕೆ ಆಧಾರ.ಆದರೆ ಕಲ್ಲು ಹೊಂಡ ಗಳ ರಸ್ತೆ ನಡುವೆ ಸಂಚಾರ ಮಾಡುತ್ತಾ ನಮ್ಮ ಜೀವನ ಸಾಗುತ್ತಿದೆ ಎಂದು ಊರಿನ ಹಿರಿಯರಾದ ಪದ್ಮಯ್ಯ ಮಲೆಯವರು ಅನುಭವ ಹಂಚಿಕೊಂಡರು. ತಡರಾತ್ರಿಯಲ್ಲಿಯೂ ಗ್ರಾಮಸ್ಥರ ಸ್ಪಂದನೆ ಅದ್ಭುತವಾಗಿತ್ತು. ಸ್ಥಳೀಯ ಹಾಡಿಕಲ್ಲು ಭಾಗದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು. ಈ ರೀತಿ ತಮ್ಮ ಬದುಕಿನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭರತ್ ಮುಂಡೋಡಿ ಸ್ವಾಗತಿಸಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಮ ಹಾಡಿಕಲ್ಲು ವಂದಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ,ಪದಾಧಿಕಾರಿಗಳಾದ ಪುಷ್ಪರಾಜ್ .ಬಿ.ಎನ್ ,ಗಂಗಾಧರ ಕಲ್ಲಪಳ್ಳಿ, ಲೋಕೇಶ್ ಪೆರ್ಲಂಪಾಡಿ, ದಯಾ ಕುಕ್ಕಾಜೆ, ಮತ್ತು ಪದ್ಮನಾಭ ಮುಂಡೋಕಜೆ, ಅಚ್ಚು ಮುಂಡಾಜೆ ಸಂವಾದದಲ್ಲಿ ಪಾಲ್ಗೊಂಡರು ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ, ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿ, ಕಾರ್ಯಕ್ರಮ ಸಂಯೋಜಿಸಿದರು.