ಮಂಗಳೂರು, ಜ 7(Daijiworld News/MSP): ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೀಯಲ್ ತನಿಖೆ ವೇಳೆ ಯಾರೊಬ್ಬ ಸಾರ್ವಜನಿಕರು, ಸಾಕ್ಷ್ಯ, ಹೇಳಿಕೆ ನೀಡಲು ಮುಂದಾಗಿಲ್ಲ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಜ.07 ರಂದು ಬೆಳಗ್ಗೆ 11 ರಿಂದ 1.30 ರವರೆಗೆ ಮಂಗಳೂರಿನ ಮಿನಿವಿಧಾನ ಸೌಧದ ಎರಡನೇ ಮಹಡಿಯಲ್ಲಿರುವ ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮ್ಯಾಜಿಸ್ಟ್ರೀಯಲ್ ತನಿಖೆ ನಡೆಸಲಿದ್ದು ಈ ಹಿನ್ನಲೆಯಲ್ಲಿ ಗಲಭೆ ಕುರಿತು ಮಾಹಿತಿ ಉಳ್ಳವರು, ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದವರು ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆ ನೀಡಬಹುದು ಎಂದು ಸಾರ್ವಜನಿಕರಿಗೆ ಮನವಿ ಸಲ್ಲಿಸಿದ್ದರು.
ಆದರೆ ಹೇಳಿಕೆ ದಾಖಲಿಸಲು ಬೆಳಗ್ಗೆ 11 ರಿಂದ 1.30ರವರೆಗೆ ಅವಕಾಶ ನೀಡಲಾಗಿತ್ತಾದರೂ, ಮಧ್ಯಾಹ್ನ 12.30 ಕಳೆದರೂ ಸಾರ್ವಜನಿಕ ಹೇಳಿಕೆ ಸಾಕ್ಷ್ಯ ದಾಖಲಿಸಲು ಬಾರದ ಕಾರಣ ವಿಚಾರಣೆ ನಡೆಸಲು ಬಂದಿದ್ದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಸುಮ್ಮನೆ ಕುಳಿತುಕೊಳ್ಳಬೇಕಾಯಿತು.
ಆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಗದೀಶ್, ಇಂದು ಸಾರ್ವಜನಿಕರ ಹೇಳಿಕೆ ಅವಕಾಶ ಕಲ್ಪಿಸಲಾಗಿತ್ತು. ಸಾರ್ವಜನಿಕ ವಿಚಾರಣೆ ಇಂದೇ ಮುಕ್ತಾಯವಾಗುತ್ತದೆ. ಆದರೆ ಆಸಕ್ತಿಯಿಂದ ಮುಂದೆ ಬರುವ ಸಾರ್ವಜನಿಕರಿಗೆ ಇನ್ನೊಂದು ಅವಕಾಶ ನೀಡಲಾಗುವುದು. ಹೇಳಿಕೆ ನೀಡಿದವರ ಗುರುತು ಮಾಹಿತಿ, ಬಹಿರಂಗಪಡಿಸಲಾಗುವುದಿಲ್ಲ. ಹೇಳಿಕೆಗಳನ್ನು ವಿಡಿಯೋ ಮೂಲಕ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು
ಇನ್ನುಳಿದಂತೆ ವೈದ್ಯರ, ದಾಖಲೆಗಳನ್ನು ಪರಿಶೀಲನೆ, ಸಿಸಿಟಿವಿ ದೃಶ್ಯಾವಳಿ ,ಗೋಲಿಬಾರ್ ನಿಂದ ಮೃತಪಟ್ಟವರ ಕುಟುಂಬದ ಹೇಳಿಕೆ, ಪೊಲೀಸರ ಹೇಳಿಕೆ, ವಿಚಾರಣೆ ಹಾಗೂ ಸ್ಟೇಷನ್ ಡೈರಿ ಮುಂತಾದ ಪರಿಶೀಲನೆ ಬಳಿಕ ತನಿಖೆ ನಡೆಸಿ ವರದಿಯನ್ನು 3 ತಿಂಗಳ ಒಳಗೆ ಸರ್ಕಾರ ಹಾಗೂ ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.