ಕಾರ್ಕಳ, ಜ 7(Daijiworld News/MSP): ಇಬ್ಬರು ಎಳೆಯ ಮಕ್ಕಳನ್ನು ಸಾಕಾಲಾಗದೇ ತಂದೆಯೊಬ್ಬ ಅವುಗಳನ್ನು ಮಾರಾಟ ಮಾಡಲು ಮುಂದಾಗಿರುವ ವಿಲಕ್ಷಣ ಘಟನೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ನೀರೆ ಎಂಬಲ್ಲಿ ಸೋಮವಾರ ನಡೆದಿದೆ.
ನೀರೆಯ ದಲಿತ ಸಮುದಾಯಕ್ಕೆ ಸೇರಿದ ಆನಂದ ಎಂಬಾತ ತನ್ನಿಬ್ಬರು ಮಕ್ಕಳನ್ನು ಹಣಕ್ಕಾಗಿ ಮಾರಾಟಕ್ಕೆ ಮುಂದಾಗಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಂದೆಯನ್ನು ವಿಚಾರಣೆ ಮಾಡಿ ಬಳಿಕ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಕ್ಕಳಿಬ್ಬರನ್ನು ಉಡುಪಿ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸಂಸ್ಥೆಗೆ ಒಪ್ಪಿಸಿದ್ದಾರೆ.
ನೀರೆಯ ಆನಂದನಿಗೆ ಕಳೆದ 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಈತನ ಪತ್ನಿ ಕಳೆದ 2 ವರ್ಷಗಳ ಹಿಂದೆ ಗಂಡ ಮಕ್ಕಳನ್ನು ತೊರೆದು ವರ್ಷಗಳೇ ಕಳೆದಿವೆ.
ಆನಂದನಿಂದ ನಾಲ್ಕೂವರೆ ವರ್ಷದ ಗಂಡು ಹಾಗೂ ಮೂರುವರೆ ವರ್ಷದ ಹೆಣ್ಣುಮಗುವಿದ್ದು ಪತ್ನಿ ತನ್ನನ್ನು ತೊರೆದ ಹಿನ್ನಲೆಯಲ್ಲಿ ಆನಂದ ವಿಧಿಯಿಲ್ಲದೇ ಸರಕಾರಿ ಜಾಗದಲ್ಲಿ ಸಣ್ಣ ಗುಡಿಸಲು ನಿರ್ಮಿಸಿ ಅದರಲ್ಲೇ ತನ್ನಿಬ್ಬರು ಮಕ್ಕಳು ಹಾಗೂ ವೃದ್ದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತ ಮಕ್ಕಳನ್ನು ಸಾಕುವುದೇ ಕಷ್ಟಕರವಾಗಿತ್ತು. ಆಗ ಆನಂದ ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದಾನೆ ಎನ್ನುವ ಖಚಿತ ಮಾಹಿತಿ ಪಡೆದ ಸ್ಥಳೀಯರು ಮಕ್ಕಳ ರಕ್ಷಣಾ ಘಟಕಕ್ಕೆ ಸುದ್ದಿ ತಿಳಿಸಿದ್ದರು.
ಸುದ್ಧಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ,ನೀರೆ ಪಂಚಾಯತ್ ಪಿಡಿಓ ಅಂಕಿತಾ ನಾಯಕ್ , ಗ್ರಾಮ ಪಂಚಾಯತಿ ಸದಸ್ಯ ಹೈದರ್ ಆಲಿ, ಪ್ರೇಮವತಿ ನಾಯಕ್ , ಗ್ರಾಮ ಲೆಕ್ಕಾದಿಕಾರಿ ವಸಂತ ಜಾರಿ, ಗಣೇಶ್ , ಸಾಹಿಲ್ ಶೆಟ್ಟಿ ಸುನಂದ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿದ್ದಾರೆ.