ಉಡುಪಿ, ಜ 07 (DaijiworldNews/SM): "ಪ್ರಮೋದ್ ಮದ್ವರಾಜ್ ಶಾಸಕರಾಗಿದ್ದಾಗ ರಾಜೀವ್ ಗಾಂಧಿ ವಸತಿ ಯೋಜನೆಗೆ ನಿವೇಷನ ರಹಿತರಿಗೆ ವಸತಿ ಸಮುಚ್ಚಯವನ್ನು ನಿರ್ಮಿಸಲು ಕಳುಹಿಸಿದ್ದ ಮಂಜೂರಾತಿಯನ್ನು ರಾಜೀವ್ ಗಾಂಧಿ ವಸತಿ ನಿಗಮವು ಸೂಕ್ತ ಡಿಪಿಆರ್ ಸಲ್ಲಿಕೆ ಮಾಡಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿತ್ತು. ಅಂದಿನ ಯೋಜನೆಗೂ ಈಗ ಹೆರ್ಗ ಗ್ರಾಮದಲ್ಲಿ ವಸತಿ ರಹಿತರಿಗೆ ನಿರ್ಮಿಸಲು ಉದ್ದೇಶಿಸಿರುವ ಯೋಜನೆಗೂ ಯಾವುದೇ ಸಂಬಂಧವಿಲ್ಲ" ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು "ಪ್ರಮೋದ್ ಮಧ್ವರಾಜ್ ಅವರು ರಾಜೀವ್ ಗಾಂಧಿ ವಸತಿ ನಿಗಮದಡಿಯಲ್ಲಿ ನಿರ್ಮಿಸಲು ಉದ್ದೆಶಿಸಿದ್ದ ವಸತಿ ಸಮುಚ್ಛಯದ ಯೋಜನೆಯನ್ನು 2018ರ ಆಗಸ್ಟ್ ನಲ್ಲಿ ನಿಗಮವು ಸೂಕ್ತ ಡಿಪಿಆರ್ ಸಲ್ಲಿಕೆಯಾಗಿಲ್ಲ ಹಾಗೂ ಯೋಜನೆಯು ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಯಮಾವಳಿಗೆ ಅನುಸಾರವಾಗಿ ಇಲ್ಲ ಎಂಬ ಕಾರಣವನ್ನು ನೀಡಿ ತಿರಸ್ಕರಿಸಿತ್ತು.
ಇನ್ನು ಚುನಾವಣೆ ಸಂರ್ಧಭದಲ್ಲಿ ಪ್ರಮೋದ್ ಮಧ್ವರಾಜ್ ಅವರು ವೋಟ್ ಪಡೆಯುವ ಉದ್ದೇಶದಿಂದ ತರಾತುರಿಯಲ್ಲಿ ಯೋಜನೆಗೆ ಮಂಜೂರಾತಿ ಸಿಗುವ ಮುನ್ನವೇ ಲಾಟರಿ ಎತ್ತುವ ಮೂಲಕ ಫಲಾನುಭವಿಗಳಿಗೆ ವಸತಿ ಹಂಚಿಕೆ ಮಾಡಿದ್ದರು. ಈ ಯೋಜನೆಯ ಫಲಾನುಭವಿಗಳು ಇದೀಗ ನನ್ನ ಬಳಿ ಬಂದು ತಮಗೆ ಫ್ಲ್ಯಾಟ್ ಯಾವಾಗ ಸಿಗುತ್ತದೆ ಎಂದು ಕೇಳುತಿದ್ದಾರೆ. ಪ್ರಮೋದ್ ಮಧ್ವರಾಜ್ ಅವರು ಪ್ರಸ್ತಾಪಿಸುತ್ತಿರುವ ರಾಜೀವ್ ಗಾಂಧಿ ವಸತಿ ಯೋಜನೆಗೂ ನಾವು ಪ್ರಸ್ತಾವಿಸುತ್ತಿರುವ ಪ್ರಧಾನ್ ಮಂತ್ರಿ ಆವಾಜ್ ಯೋಜನೆಗೂ ಯಾವುದೇ ಸಂಭಂದ ಇಲ್ಲ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.