ಬೆಂಗಳೂರು, ಜ 26: ಸಿದ್ದಗಂಗಾ ಮಠಾಧೀಶ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ರಾಜ್ಯದ ಸಿಎಂ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದಗಂಗಾ ಶ್ರೀಗಳಿಗೆ 'ಭಾರತ ರತ್ನ' ಪ್ರಶಸ್ತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ. ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನವನ್ನು ನೀಡಬೇಕು ಎನ್ನುವುದು ಲಕ್ಷಾಂತರ ಭಕ್ತರ ಮನವಿಯಾಗಿದ್ದು, ಕೇಂದ್ರ ಸರ್ಕಾರ ಕೊಡ ಮಾಡುವ ಭಾರತ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಬೇಕು ಎಂದು ಅವರು ಸಿಎಂ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ನಡೆದಾಡುವ ದೇವರು ಎಂದೇ ಖ್ಯಾತಿಯಾಗಿರುವ ತುಮಕೂರು ಸಿದ್ದಗಂಗಾ ಶ್ರೀಗಳ ಹೆಸರು ದೇಶದ ಅತ್ಯುನ್ನತ ಪುರಸ್ಕಾರಕ್ಕೆ ಪ್ರಸ್ತಾಪವಾಗಿದೆ. ಭಾರತ ರತ್ನ ಪ್ರಶಸ್ತಿಯ ಆಯ್ಕೆಗಾಗಿ ರಚನೆಗೊಂಡಿರುವ ಉನ್ನತ ಮಟ್ಟದ ಸಮಿತಿ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರು ಪ್ರಸ್ತಾಪ ಮಾಡಿದೆ. ದೇಶದ ಅನೇಕ ಸಾಧಕರ ಹೆಸರು ಈ ಪಟ್ಟಿಯಲ್ಲಿದ್ದು, ತುಮಕೂರಿನ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ನೀಡುವುದು ಬಹುತೇಕ ಖಚಿತವಾಗಿದೆ.
ಡಾ ಶಿವಕುಮಾರಸ್ವಾಮಿಗಳ ತ್ರಿವಿಧ ದಾಸೋಹ, ಸಾಮಾಜಿಕ ಕಾರ್ಯಗಳು, ಸಮಾಜ ಸುಧಾರಣೆಯ ಕ್ರಮಗಳ ಬಗ್ಗೆ ಸಮಿತಿ ಸಭೆಯಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಶಿವಕುಮಾರ ಸ್ವಾಮಿಗಳ ಸಾಮಾಜಿಕ ಕಾರ್ಯಗಳ ಹಿನ್ನಲೆಯಲ್ಲಿ ಭಾರತರತ್ನ ನೀಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.