ಕಾಸರಗೋಡು, ನ.19 (DaijiworldNews/TA): ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನಯಾಲ್ ಪೆರಿಯಾಟಡ್ಕದ ನೀರಾಟಿ ನಿವಾಸಿ ಧನ್ಯ ಎಂಬವರ ಮನೆಯಲ್ಲಿ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.

ವಿದ್ಯುತ್ ಮೀಟರ್ ಪೆಟ್ಟಿಗೆಯೊಳಗೆ ಇಟ್ಟಿದ್ದ ಮನೆಯ ಕೀಲಿಯನ್ನು ಬಳಸಿ ಬಾಗಿಲು ತೆರೆದ ಕಳ್ಳರು ಒಳನುಗ್ಗಿ, ಕಪಾಟಿನಲ್ಲಿದ್ದ ಐದು ಪವನ್ ಚಿನ್ನಾಭರಣ ಹಾಗೂ ಸುಮಾರು 3 ಸಾವಿರ ರೂಪಾಯಿ ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಧನ್ಯ ಅವರು ಪ್ರತಿದಿನದಂತೆ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದರು. ನ.೧೯ರ ಬೆಳಗ್ಗೆ 5.10ಕ್ಕೆ ಮನೆಗೆ ಬೀಗ ಹಾಕಿ ಹೊರಟಿದ್ದ ಅವರು, 6 ಗಂಟೆಗೆ ಮರಳಿ ಬಂದಿದ್ದರು. ಮೀಟರ್ ಪೆಟ್ಟಿಗೆಯಿಂದ ಕೀಲಿ ತೆಗೆದು ಬಾಗಿಲು ತೆರೆದ ಬಳಿಕ ಕಪಾಟನ್ನು ಪರಿಶೀಲಿಸಿದಾಗ ಕಳವು ನಡೆದಿರುವುದು ತಿಳಿದುಬಂದಿದೆ.
ತಕ್ಷಣವೇ ತಮ್ಮ ಮಾವ ಮಣಿ ನೀರಾಟಿ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಬೇಕಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಲಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.