ಉಡುಪಿ, ಜ 26: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಸಂದರ್ಭ ಕಾಂಗ್ರೆಸ್ ನಾಯಕರಿಗೆ ಅವಮಾನ ಮಾಡಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ಸಂದರ್ಭ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ನಾಲ್ಕನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ ಯುಪಿಎ ಸರ್ಕಾರ ಇದ್ದಾಗ ಆಗಿನ ವಿರೋಧ ಪಕ್ಷದ ನಾಯಕ ಅಡ್ವಾಣಿಗೆ ವಿಶೇಷ ಗೌರವ ನೀಡಿ ಮೊದಲ ಸಾಲಿನಲ್ಲಿ ಆಸನದ ವ್ಯವಸ್ಥೆ ಕಲ್ಪಿಸಿದ್ದೆವು ಎಂದು ಹೇಳಿದ್ದಾರೆ.
ವಿರೋಧ ಪಕ್ಷವನ್ನು ಗೌರವಿಸುವ ಗುಣ ಕಾಂಗ್ರೆಸ್ ನಾಯಕರಿಗೆ ಇತ್ತು, ಆದರೆ ಈಗಿನ ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕರನ್ನು ಗೌರವಿಸುವ ಗುಣ ಇಲ್ಲ ಎಂದು ಕಿಡಿ ಕಾರಿದ್ದಾರೆ.