ಮಂಗಳೂರು, ಜ 27: ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಸರಳ ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಜನಾರ್ದನ ಪೂಜಾರಿ ಅವರ ಆತ್ಮಚರಿತ್ರೆ ಪುಸ್ತಕ 'ಸಾಲಮೇಳದ ಸಂಗ್ರಾಮ' ಶುಕ್ರವಾರ ಲೋಕಾರ್ಪಣೆಗೊಂಡಿತು.
ನಗರದ ಕುದ್ರೋಳಿ ಶ್ರಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಸಾಲಮೇಳದ ಸಂಗ್ರಾಮ' ಆತ್ಮಚರಿತ್ರೆ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.
ತಮ್ಮ ಸುದೀರ್ಘ 45 ವರ್ಷಗಳ ರಾಜಕೀಯ ಜೀವನವನ್ನು ತಮ್ಮ ಈ ಆತ್ಮಕಥೆಯಲ್ಲಿ ಪೂಜಾರಿ ದಾಖಲಿಸಿದ್ದಾರೆ. ಪೂಜಾರಿಯವರ ಆತ್ಮಚರಿತ್ರೆ ಪುಸ್ತಕದಲ್ಲಿ ಅನೇಕ ವರುಷಗಳ ರಾಜಕೀಯ ಪಯಣ, ರಾಜಕೀಯ ಜೀವನದಲ್ಲಿ ಪೂಜಾರಿಯವರ ಅನುಭವ, ರಾಜಕೀಯದಲ್ಲಿ ಕಳೆದುಕೊಂಡಿರುವುದು ಏನು..?, ಪಡೆದುಕೊಂಡಿರುವುದು ಏನು..?, ಹಿಂದೆ ನಿಂತು ಬೆನ್ನಿಗೆ ಚೂರಿ ಹಾಕಿದವರು ಯಾರು..? ಈ ಎಲ್ಲಾ ಅಂಶಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಪೂಜಾರಿಯವರ ಜೀವನ ಸೇರಿದಂತೆ ರಾಜಕೀಯದ ಎಲ್ಲಾ ಸಿಹಿ ಕಹಿ ಅನುಭವಗಳು ಈ ಪುಸ್ತಕದಲ್ಲಿ ಮುದ್ರಿಸಲಾಗಿದೆ
ಪುಸ್ತಕ ಬಿಡುಗಡೆ ದಿನದ ಪ್ರಯುಕ್ತ 300 ರೂಪಾಯಿಯ ಪುಸ್ತಕವನ್ನು 50 ರೂ.ಗೆ ವಿತರಣೆ ಮಾಡಲಾಗಿದೆ. ಪುಸ್ತಕ ಕೊಳ್ಳಲು ಜನಾರ್ದನ ಪೂಜಾರಿಯವರ ನೂರಾರು ಅಭಿಮಾನಿಗಳು ಮುಗಿಬಿದ್ದಿದ್ದರು. ಪುಸ್ತಕ ಓದಿ ಅನೇಕರು ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಬಿಜೆಪಿ, ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದು ಹಿರಿಯ ಕಾಂಗ್ರೆಸ್ ನಾಯಕರ ಆತ್ಮಕಥೆ ಬಿಡುಗಡೆಗೆ ಸಾಕ್ಷಿಯಾಗಿದ್ದಾರೆ.