ಮಂಗಳೂರು, ಜ 27: ನಗರದ ಬೋಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಈಶ್ವರ ಪೂಜಾರಿ (76) ಎಂದು ಗುರುತಿಸಲಾಗಿದೆ. ಇದೀಗ ಮಗ ರಮೇಶ್ ತಂದೆಯನ್ನು ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಲಾರಿ ಚಾಲಕನಾಗಿದ್ದ ಮಗ ರಮೇಶ್ ಮತ್ತು ತಂದೆ ಈಶ್ವರ ಪೂಜಾರಿ ಮನೆಯಲ್ಲಿ ಪ್ರತಿದಿನ ಮಧ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ದಿನವೂ ಮನೆಯಲ್ಲಿ ಗಲಾಟೆ ನಡೆದಿದ್ದು, ತಂದೆಗೆ ಮಗ ಚೂರಿಯಿಂದ ಇರಿಯಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆ ಸ್ವತಃ ಮಗನೇ ತಂದೆಯನ್ನು ಕೊಂದು ನೇಣಿಗೆ ಹಾಕಿರುವ ಶಂಕೆ ವ್ಯಕ್ತವಾಗಿದೆ. ಇಂದು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬರ್ಕೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.