ಮಂಗಳೂರು, ಜ 27 : ನಗರದಲ್ಲಿ ರಸ್ತೆ ಬದಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡಿದರೆ ಅವರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆಯನ್ನು ಯುವಕರ ತಂಡವೊಂದು ಹಾಕಿದೆ.
ಹೌದು, ಪ್ರತೀ ಭಾನುವಾರ ರಾಮಕೃಷ್ಣ ಮಿಷನ್ ವತಿಯಿಂದ ನೂರಾರು ಸ್ವಯಂ ಸೇವಕರು ಮಂಗಳೂರು ನಗರವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಸ್ವಚ್ಛಗೊಳಿಸಿದ ಮಾರನೇ ದಿನ ಮತ್ತೆ ಸಾರ್ವಜನಿಕ ಸ್ಥಳದಲ್ಲಿ ಜನ ಕಸ ಹಾಕಿ, ಮೂತ್ರ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಸಿಟ್ಟಾದ ಯುವಕರ ತಂಡವು, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವವರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಹಾಕಿದೆ.
ಮಂಗಳೂರಿನಲ್ಲಿ ಯುವಕರ ತಂಡದ ವತಿಯಿಂದ ನೂತನ ಅಭಿಯಾನ ಆರಂಭವಾಗಿದ್ದು, ಬಸ್ ನಿಲ್ದಾಣದಲ್ಲಿ ಶೌಚಾಲಯಗಳಿದ್ದರೂ ಅದನ್ನು ಬಳಸದ ಜನರಿಗೆ ತಕ್ಕ ಪಾಠ ಕಲಿಸಲು ಯುವಕರ ತಂಡ ಮುಂದಾಗಿದೆ. ಈ ತಂಡದ ಕಾರ್ಯಕ್ಕೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ ಘಟನೆ ನಡೆದಿತ್ತು. ಇದೀಗ ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕರ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.