ಉಪ್ಪಿನಂಗಡಿ, ಜ 26: ಕೆ.ಆರ್. ಪೇಟೆಯಲ್ಲಿರುವ ಅಲ್ಪಸಂಖ್ಯಾತ ಮಾದರಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಝೈಬುನ್ನೀಸ ಆತ್ಮಹತ್ಯೆ ಪ್ರಕರಣದಲ್ಲಿ ಸಂಶಯ ಹೆಚ್ಚಾಗಿದೆ.
ಝೈಬುನ್ನಿಸಾ ಅವರ ಆತ್ಮಹತ್ಯೆಗೆ ಶಾಲೆಯಲ್ಲಿನ ಅಧ್ಯಾಪಕ ರವಿ ಎನ್.ಎಸ್. ಕಾರಣ ಎನ್ನುವ ಶಂಕೆ ವ್ಯಕ್ತವಾಗಿದ್ದು, ಅವರ ವಿರುದ್ಧ ಕೆ.ಆರ್.ಪೇಟೆ ಪೊಲೀಸರಿಗೆ ಬಾಲಕಿಯ ಮಾವ ಹಸೈನಾರ್ ದೂರು ನೀಡಿದ್ದಾರೆ.
ಝೈಬುನ್ನೀಸ ಅವರ ತಂದೆ- ತಾಯಿಯ ಹೇಳಿಕೆಗಳು ಮತ್ತು ಝೈಬುನ್ನೀಸ ಸಾವನ್ನಪ್ಪುವ ಮೊದಲು ತಾಯಿಗೆ ಮಾಡಿದ ದೂರವಾಣಿ ಕರೆಯ ರೆಕಾರ್ಡ್ ಆಲಿಸಿದಾಗ ಈಕೆಯ ಸಾವಿನಲ್ಲಿ ಸಂಶಯ ವ್ಯಕ್ತವಾಗುತ್ತಿದ್ದು, ಈ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆದು ಇದರ ಹಿಂದಿರುವ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎನ್ನುವ ಆಗ್ರಹಗಳು ಕೇಳಿ ಬರುತ್ತಿದೆ.
ನವೋದಯ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಝೈಬುನ್ನಿಸಾಳಿಗೆ ಅಲ್ಲಿನ ಆಂಗ್ಲ ವಿಷಯದ ಅಧ್ಯಾಪಕ ರವಿ.ಎನ್.ಎಸ್. ಕಳೆದ ಮೂರು ತಿಂಗಳುಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಆಕೆಗೆ ಜಾತಿ ನಿಂದನೆ ಮಾಡುತ್ತಿದ್ದರು. ಆಕೆಯನ್ನು ಹೀಯಾಳಿಸಿ ವಿದ್ಯಾರ್ಥಿನಿಯರ ಎದುರೇ ಅವಮಾನ ಮಾಡುತ್ತಿದ್ದರು. ಕೂದಲಿನ ಜುಟ್ಟು ಹಿಡಿದು ಹೊರಗೆ ತಂದು ಗೋಡೆಗೆ ಬಡಿಯುತ್ತಿದ್ದರು ಎಂದು ಝೈಬುನ್ನೀಸಾ ತನ್ನ ತಾಯಿಯಲ್ಲಿ ಹೇಳಿಕೊಂಡಿದ್ದಾಳೆ.
ಝೈಬುನ್ನೀಸಾ ಕೆಲವು ದಿನಗಳ ಹಿಂದೆ ತನ್ನ ತಾಯಿಗೆ ಫೋನ್ ಮಾಡಿ ತನ್ನನ್ನು ಶಾಲೆಯಿಂದ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಈ ಸಂದರ್ಭ ತಾಯಿ ಶಾಲೆಗೆ ಬಂದು ಮಾತನಾಡುವುದಾಗಿ ಹೇಳಿದ್ದಾರೆ. ಬುಧವಾರವೂ ಸಂಜೆ 4.30 ಕ್ಕೆತಾಯಿಗೆ ಫೋನ್ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದು, ಅದಕ್ಕೆ ಬರುವುದಾಗಿ ತಾಯಿ ಭರವಸೆ ನೀಡಿದ್ದರು. ತಾಯಿ ಸಂಜೆ ವಸತಿ ಶಾಲೆಗೆ ಹೋಗುವಷ್ಟರಲ್ಲಿ ಮಗಳು ಸಾವನ್ನಪ್ಪಿದ್ದಳು.
ಈ ಪ್ರಕರಣದ ಬಗ್ಗೆ ಶಾಸಕಿಶಕುಂತಳಾಟಿ. ಶೆಟ್ಟಿ ಈಗಾಗಲೇ ಮಕ್ಕಳ ಆಯೋಗದ ಅಧ್ಯಕ್ಷೆ ಜತೆ ಮಾತನಾಡಿದ್ದು, ಗೃಹ ಸಚಿವರನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ನೀಡುತ್ತೇನೆ ಮತ್ತು ಸಿಒಡಿ ತನಿಖೆಗೆ ಒತ್ತಾಯಿಸುತ್ತೇನೆ, ನನ್ನಿಂದ ಆಗುವ ಎಲ್ಲ ರೀತಿ ಸಹಕಾರ ನೀಡುತ್ತೇನೆ ಎಂದು ಮನೆಯವರಿಗೆ ಭರವಸೆ ನೀಡಿದ್ದಾರೆ.