ಮಂಗಳೂರು, ಜ 27: ಯಾವುದೇ ಪಕ್ಷ ಅಥವಾ ಸಂಘಟನೆಗಳು ಶವ ಮತ್ತು ಸಾವಿನಲ್ಲಿ ರಾಜಕೀಯ ಮಾಡಬಾರದು ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾವಿನ ದುಃಖ ಹೆತ್ತವರು ಮತ್ತು ಅವರ ಕುಟುಂಬಕ್ಕೆ ಮಾತ್ರ ಗೊತ್ತು. ಒಮ್ಮೆ ಬೊಬ್ಬೆ ಹಾಕಿ ರಾಜಕೀಯ ಮಾಡಿ ಮಾಯವಾಗುವ ಬದಲು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಎಂದು ತಿಳಿಸಿದ್ದಾರೆ.
ಉಪ್ಪಿನಂಗಡಿಯ ಝೈಬುನ್ನಿಸಾ ಸಾವಿನ ಬಗ್ಗೆ ನಮಗೂ ಬೇಸರವಿದೆ. ಅನ್ಯಾಯದ ಸಾವನ್ನು ಎಂದಿಗೂ ಸಹಿಸಲಾಗದು, ಕಿರುಕುಳದ ಆರೋಪ ಹೊತ್ತಿರುವ ವಾರ್ಡನ್ ರವಿ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಮನೆಯವರು ನೀಡಿದಂತೆ ಕೇಸು ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 34 ಮತ್ತು 306 ಪ್ರಕರಣ ದಾಖಲಿಸಲಾಗಿದೆ. ಕಾನೂನು ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಎಂದಿಗೂ ಹಿಂದೇಟು ಹಾಕುವುದಿಲ್ಲ ಎಂದು ತಿಳಿಸಿದರು.
ಈ ಪ್ರಕರಣದ ಬಗ್ಗೆ ತಿಳಿದುಕೊಳ್ಳದೆ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. 20 ದಿನಗಳ ಹಿಂದೆ ವಿದೇಶದಿಂದ ಬಾಲಕಿಯ ಸಂಬಂಧಿಕರು ಕರೆ ಮಾಡಿ ಹಾಸ್ಟೆಲ್ನಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ತಾನು ಸಂಬಂಧಪಟ್ಟವರಲ್ಲಿ ಮಾತನಾಡಿದ್ದೆ, ಬಳಿಕ ಅವರು ಸಂಪರ್ಕ ಮಾಡಿಲ್ಲ. ಬಾಲಕಿ ಆತ್ಮಹತ್ಯೆ ಮಾಡಿದ ದಿನ ಮೊದಲ ಕರೆಯೇ ತನಗೆ ಬಂದಿದ್ದು, ಈ ಮಧ್ಯೆ ಪ್ರಯಾಣದಲ್ಲಿರುವಾಗಲೇ ಹಲವು ಬಾರಿ ಕರೆ ಬಂದಿದ್ದರಿಂದ ಸ್ಥಳೀಯ ಕಾರ್ಪೊರೇಟರ್ ಸುಹೈಲ್ಗೆ ಕರೆ ಮಾಡಿ ಝೈಬುನ್ನಿಸಾ ಹೆತ್ತವರಿಗೆ ಸಂಪರ್ಕಿಸುವಂತೆ ಮಾಡಲಾಗಿದೆ. ಅಗತ್ಯ ವ್ಯವಸ್ಥೆ ಮಾಡಲಾಗಿದ್ದರೂ ಶವ ಇಟ್ಟು ರಾಜಕೀಯ ಮಾಡಲಾಗಿದ್ದು, ತಾಯಿ ಕರೆ ಮಾಡಿ ಶವ ಬಿಟ್ಟು ಕೊಡಿ ಎಂದು ಅಲವತ್ತುಕೊಂಡಿದ್ದರು ಎಂದು ತಿಳಿಸಿದರು.