ಬೆಳ್ತಂಗಡಿ, ಜ 11(Daijiworld News/MSP): ಅನೇಕ ಪ್ರಕರಣಗಳಲ್ಲಿ ಅರಣ್ಯ ಇಲಾಖೆಗೆ ಬೇಕಾಗಿದ್ದ ಎರಡು ವರ್ಷದಿಂದ ತಲೆಮರೆಸಿಕೊಂಡಿದ ಕುಖ್ಯಾತಿ ಮರಗಳ್ಳ ಎಸ್. ಮಹಮ್ಮದ್ ಬಾವಾ ಬಿನ್ ಎಸ್. ಅಬ್ದುಲ್ಲ ಎಂಬಾತನನ್ನು ಜ.10ರ ಶುಕ್ರವಾರ ಸಂಜೆ ಬೆಳ್ತಂಗಡಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಜಿರೆಯ ಮಚಾರು ಎಂಬಲ್ಲಿ ಆರೋಪಿಯೂ ಮನೆಗೆ ಬಂದಿದ್ದಾಗ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿದ್ದಾರೆ. ಆರೋಪಿಯೂ ಬೆಳ್ತಂಗಡಿ ಹಾಗು ಇತರ ವಲಯ ವ್ಯಾಪ್ತಿಯ ಮೀಸಲು ಅರಣ್ಯದಿಂದ ಬೆಲೆಬಾಳುವ ಬೀಟೆ , ಸಾಗುವಾನಿ, ಹಲಸು, ಮುಂತಾದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ.
ಅರೋಪಿಯನ್ನು ಬೆಳ್ತಂಗಡಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಅರೋಪಿತನಿಗೆ ನ್ಯಾಯಾಂಗ ಬಂಧನ ನೀಡಲು ಆದೇಶ ನೀಡಿದ್ದಾರೆ.
ಈ ಪ್ರಕರಣದ ಕುರಿತು ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳಾದ ಸುಬ್ಬಯ್ಯ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಆರೋಪಿಯನ್ನು ಬಂಧಿಸುವಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ವಿನೋದ್ ಗೌಡ, ರವೀಂದ್ರ ಅಂಕಲಗಿ, ಉಲ್ಲಾಸ್ ಕೆ. ರಾಜೇಶ್, ಹರಿಪ್ರಸಾದ್, ಕಮಲ, ರಾಘವೇಂದ್ರ ಪ್ರಸಾದ್, ಈಶ್ವರ ನಾಯಕ್, ವಿನಯ್ಚಂದ್ರ ಯಶಸ್ವಿಯಾಗಿದ್ದಾರೆ.