ಮಂಗಳೂರು, ಜ 28 : ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುರ್ನಾಡು ಮತ್ತು ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ನೂತನ ಕೇಂದ್ರ ಕಾರಾಗೃಹದ ನಿವೇಶನದ ಆವರಣ ಗೋಡೆ ನಿರ್ಮಾಣಕ್ಕೆ ಆಹಾರ ಸಚಿವ ಯು.ಟಿ. ಖಾದರ್ ಶಂಕುಸ್ಥಾಪನೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯಕ್ಕೆ ಮಾದರಿಯಾಗಿ ನಿರ್ಮಾಣವಾಗಲಿರುವ ಕೇಂದ್ರ ಕಾರಾಗೃಹ ಸುಸಜ್ಜಿತವಾಗಿರಬೇಕು ಎಂಬ ನೆಲೆಯಲ್ಲಿ ಹಂತಹಂತವಾಗಿ ಕಾಮಗಾರಿ ನಡೆಸುತ್ತಾ ಮೂರು ವರ್ಷದೊಳಗೊಡೆ ಸಂಪೂರ್ಣ ಗೊಳಿಸುವ ಯೋಜನೆ ಇದೆ . 200 ಕೋಟಿ ರೂಪಾಯಿ ವೆಚ್ಚದಲ್ಲಿ ಜೈಲು ನಿರ್ಮಾಣಕ್ಕೆ ಸಂಬಂಧಿಸಿದ ಕಡತ ಸರಕಾರದ ಕ್ಯಾಬಿನೆಟ್ ನ ಅಂಗೀಕಾರಕ್ಕೆ ಬಂದಿದ್ದು ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ ಎಂದು ಹೇಳಿದರು.ಒಳನಾಡು ಜಲಸಾರಿಗೆ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಜೈಲು ಅಧಿಕಾರಿ ಬಿ.ಆರ್. ಆಂದನ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.