ತೊಕ್ಕೊಟ್ಟು ಜ 28 : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಜೋಸೆಫ್ ನಗರದಲ್ಲಿ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಇಟ್ಟಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್ ರವರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸುಮಾರು 100 ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ 7 ಲಕ್ಷ ರೂಪಾಯಿ ಎನ್ನಲಾಗಿದೆ. ಪತ್ತೆಯಾದ ಅಕ್ರಮ ಮರಳನ್ನು ಯಾರು ಯಾವ ಕಾರಣಕ್ಕಾಗಿ ಕಳವು ಮಾಡಿ ದಾಸ್ತಾನು ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಅಕ್ರಮ ಮರಳುಗಾರಿಕೆ, ಸಾಗಾಟ, ದಾಸ್ತಾನು, ಕಳವು, ಮಾರಾಟದ ಬಗ್ಗೆ ಮಾಹಿತಿಗಳು ಇದ್ದಲ್ಲಿ ಠಾಣಾಧಿಕಾರಿಯವರಿಗೆ ಮತ್ತು ಇಲಾಖಾ ಮೇಲಾಧಿಕಾರಿಯವರಿಗೆ ನೇರವಾಗಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.