ಚಿತ್ರರಂಗದಲ್ಲಿ ಸೋನಲ್ ಮೊಂತೇರೋ ಗೆಲುವಿನ ಕುದುರೆಯನ್ನು ಏರಿರುವಾಗಲೇ ಇವರ ಮದ್ವೆ ಸುದ್ದಿ ಹೊರಬಿದ್ದಿದೆ. ಇನ್ನೇನು ಸ್ವಲ್ಪ ದಿನದಲ್ಲೇ ಎಲ್ಲಾ ತಯಾರಿ ಮುಗಿಸಿಕೊಂಡು ಇವರ ಮದುವೆ ದಿಬ್ಬಣ ಕೂಡಾ ಸಾಗಲಿದೆ. ಆದರೆ ಇವರ ಮದುವೆ ದಿಬ್ಬಣ ಸಾಗೋದು ಮದುವೆ ಮಂಟಪ ಕಡೆಗಲ್ಲಾ, ಥಿಯೇಟರ್ ಕಡೆಗೆ.
ಎಸ್.ಉಮೇಶ್ ನಿರ್ದೇಶನದ ಚಿತ್ರ ಮದುವೆ ದಿಬ್ಬಣ ಈಗಾಗಲೇ ತನ್ನೆಲ್ಲಾ ಕೆಲಸಗಳನ್ನು ಮುಗಿಸಿ ಸೆನ್ಸಾರ್ ಬಾಗಿಲು ತಟ್ಟಿತ್ತು ಇದೀಗ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಚಿತ್ರ ಪೆಬ್ರವರಿಯಲ್ಲಿ ರಾಜಾದ್ಯಂತ ಬಿಡುಗಡೆಯಾಗುವ ನಿರೀಕ್ಷೆ ಇದೆ. ಚಿತ್ರದಲ್ಲಿ ಅಭಿಷೇಕ್ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಕನ್ನಡ, ತುಳು ಮತ್ತು ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಯುವನಟಿ ಕರಾವಳಿಯ ಬೆಡಗಿ ಸೋನಾಲ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರವಿಕಿರಣ್, ಚಂದ್ರಕಲಾ ಮೋಹನ್ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಬಿ.ಎನ್.ಆರ್. ಫಿಲಂಸ್ ಬ್ಯಾನರ್ನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಬಿ.ಎನ್.ರವಿ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. 'ಮದ್ವೆ ದಿಬ್ಬಣ' ಚಿತ್ರಕ್ಕೆ ಚಂದ್ರು ಬೆಳವಂಗಲ ಅವರ ಛಾಯಾಗ್ರಹಣವಿದೆ.