ಕೋಲಾರ ಜ 28 : ಹೆಚ್ಚಾಗಿ ವಧುವೋ ಅಥವಾ ವರನೋ ನಾಪತ್ತೆಯಾಗಿ ಮದುವೆ ಮುರಿದು ಬೀಳುವ ಪ್ರಸಂಗಗಳು ಅಲ್ಲೊಮ್ಮೆ ಇಲ್ಲೊಮ್ಮೆ ನಡೆಯುತ್ತದೆ.ಆದರೆ ಕೋಲಾರದಲ್ಲಿ ವಧು, ವರ ಇಬ್ಬರೂ ನಾಪತ್ತೆಯಾಗಿ ಭಾನುವಾರ ನಡೆಯಬೇಕಿದ್ದ ಅದ್ಧೂರಿ ಮದುವೆಯೆ ಮುರಿದು ಬಿದ್ದಿದೆ. ವಧು ನಾಪತ್ತೆಯಾಗಿದ್ದಾಳೆ ಎಂದು ತಿಳಿದ ಕ್ಷಣ ಎಲ್ಲಾ ಮಾತುಕತೆ ನಡೆಸಿ ವಧುವಿನ ತಂಗಿಯೊಡನೆ ವಿವಾಹ ನೆರವೇರಿಸಲು ಹಿರಿಯರು ತೀರ್ಮಾನಿಸಿರುತ್ತಾರೆ. ಆದರೆ ಮುಂಜಾನೆ ಮದುವೆ ಎನ್ನುವ ವೇಳೆ ವರ ಕೂಡಾ ನಾಪತ್ತೆಯಾಗಿದ್ದ.
ಘಟನೆಯ ವಿವರ :
ಬಂಗಾರಪೇಟೆಯ ನೇರ್ನಳ್ಳಿಯ ಎನ್ . ಸೌಮ್ಯ ಎಂಬಾಕೆಗೆ ಮಾಲೂರಿನಚನ್ನಕಲ್ಲಿನ ನಿವಾಸಿ ಸಿ.ಎಂ.ಗುರೇಶ್ ಜೊತೆ ವಿವಾಹ ನೆರವೇರಬೇಕಿತ್ತು. ಶನಿವಾರ ಸಂಜೆ ಇದ್ದಕ್ಕಿದ್ದಂತೆ ವಧು ಸೌಮ್ಯ ನಾಪತ್ತೆಯಾಗಿದ್ದಾಳೆ. ವಧು ನಾಪತ್ತೆಯಾದ ಬೆನ್ನಲ್ಲೇ ವರ ಗುರೇಶ್ ಮತ್ತು ಸೌಮ್ಯ ಕಡೆಯವರು ಮದುವೆ ಮುರಿದು ಬೀಳಬಾರದು ಎಂಬ ಸದುದ್ದೇಶದಿಂದ ಸೌಮ್ಯ ಚಿಕ್ಕಪ್ಪನ ಪುತ್ರಿ ವೆಂಕಟರತ್ನಮ್ಮ ಳೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದ ವರ ಗುರೇಶ್ ಬೆಳಗ್ಗೆ ತಾನೂ ಸಹ ಕಾಣೆಯಾಗಿದ್ದಾನೆ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. ಹೀಗೆ ವಧು, ವರ ಇಬ್ಬರೂ ನಾಪತ್ತೆಯಾದ ಕಾರಣ ವರ ಹಾಗೂ ವಧುವಿನ ಕುಟುಂಬದವರು ಕಂಗಾಲಾಗಿದ್ದಾರೆ. 700 ಕ್ಕೂ ಹೆಚ್ಚು ಬಂಧು-ಮಿತ್ರರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದರೂ ಇದೀಗ ಮದುವೆ ನಡೆಯದಿದ್ದರೆ ಇದೆಲ್ಲವೂ ವ್ಯರ್ಥವಾಗಲಿದೆ. ಮದುವೆಗಾಗಿ ದೂರದ ಪ್ರದೇಶದಿಂದ ಆಗಮಿಸಿದ್ದ ಜನರು ಮದು ಮಕ್ಕಳಿಗೆ ಶುಭ ಹಾರೈಸದೆ ನಿರಾಸೆಯಿಂದ ವಾಪಾಸ್ಸಾಗುತ್ತಿದ್ದಾರೆ.
ಘಟನೆ ಸಂಬಂಧ ಮಾಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕುಟುಂಬಿಕರು, ಸಂಬಂಧಿಕರು ವರನ ಆಗಮನಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ.