ಭಾರತದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕೇರಳದಲ್ಲಿ ಮುಸ್ಲಿಂ ಮಹಿಳೆ ಜಮಿತಾ (34)ಎಂಬುವರು ಜ ೨೬ ರ ಶುಕ್ರವಾರ ನಮಾಜ್ (ಜುಮಾ)ನ ನೇತೃತ್ವ ವಹಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಹೆಚ್ಚಾಗಿ ನಮಾಜ್ ಮಾಡುವಾಗ ಪುರುಷ ಧರ್ಮ ಗುರುಗಳೇ ನಡೆಸಿಕೊಡುತ್ತಾರೆ. ಆದರೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಮಾಮ್ ಆಗಿ ಜಮಿತಾ ನಮಾಜ್ ನ ನೇತೃತ್ವವನ್ನು ವಹಿಸಿಕೊಂಡು ಇದೀಗ ಸುದ್ದಿಯಾಗಿದ್ದಾರೆ. ಕುರಾನ್ ಸುನ್ನತ್ ಸೊಸೈಟಿಯ ಕಾರ್ಯಾಲಯದಲ್ಲಿ ಮೊನ್ನೆಯಷ್ಟೇ ನಡೆದ ನಮಾಜಿನಲ್ಲಿ ಸುಮಾರು 80 ಮಂದಿ ಭಾಗವಹಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಮಾಮ್, ಕುರಾನ್ ನಲ್ಲಿ ಎಲ್ಲಿಯೂ ಕೂಡಾ ಮಹಿಳಾ ತಾರತಮ್ಯದ ಬಗ್ಗೆ ಉಲ್ಲೇಖ ಮಾಡಿಲ್ಲ. ಇಮಾಮ್ ಆಗಿ ಕರ್ತವ್ಯ ನಿರ್ವಹಿಸಬಾರದು ಎಂದು ಕೂಡಾ ಎಲ್ಲಿಯೂ ಇಲ್ಲ. ಇದೇ ಮೊದಲ ಬಾರಿಗೆ ನಾನು ಪ್ರಾರ್ಥನೆಯ ನೇತೃತ್ವ ವಹಿಸುತ್ತಿದ್ದೇನೆ. ಆದರೆ ಈ ಹಿಂದೆ ಕಚೇರಿಯಲ್ಲಿ ಪ್ರಾರ್ಥನೆ ಬಹಳ ಸಾರಿ ನಮಾಜು ನಡೆಸಿದ್ದೇನೆ ಎಂದರು.
ಆದರೆ ಜಮಿತಾ ಗೆ ಇದೆಲ್ಲವೂ ಸುಲಭದಲ್ಲಿ ಒಲಿದು ಬರಲಿಲ್ಲ. ಈ ಹಿಂದೆ ಧರ್ಮದಲ್ಲಿ ಅಸ್ತಿತ್ವದಲ್ಲಿ ಇದ್ದಂತಹ ಅಭ್ಯಾಸಗಳನ್ನು ಜಮಿತಾ ಪ್ರಶ್ನಿಸಿದಾಗ ಕೊಲೆ ಯಂತಹ ಬೆದರಿಕೆಗಳನ್ನು ಎದುರಿಸಿದ್ದರು. ಹೀಗಾಗಿ 2016 ಅವರು ಇದ್ದ ಊರು ತೊರೆದು ಸಂಬಂಧಿಗಳ ಮನೆಯಲ್ಲಿ ಅಶ್ರಯ ಪಡೆದುಕೊಳ್ಳುವಂತಾಯಿತು. ತದ ನಂತರ, ಖುರಾನ್ ಸುನ್ನಾತ್ ಸೊಸೈಟಿ ಜಮಿತಾಳನ್ನು ಅಧಿವೇಶನಕ್ಕೆ ಆಹ್ವಾನಿಸಿ, ಅವಳ ಮನಸ್ಸನ್ನು ಮನಃಪೂರ್ವಕವಾಗಿ ಸ್ವಾಗತಿಸಿತು. ಇಂದು ಅವರು ಸಮಾಜದ ಕಾರ್ಯದರ್ಶಿಯಾಗಿದ್ದಾರೆ. ಒಟ್ಟಾರೆಯಾಗಿ ಈ ಬೆಳವಣಿಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.