ಮಂಗಳೂರು, ಜ 13 (DaijiworldNews/SM): ರಾಮನಗರದ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ವಿರೋಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಕನಕಪುರ ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಭಾಕರ್ ಭಟ್ ವಿರುದ್ದ ಮಾಜಿ ಸಚಿವ ಯುಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದು ಡಾ.ಕಲ್ಲಡ್ಕ ಪ್ರಭಾಕರ್ ಭಟ್ ರವರ ಅತೀ ಸಣ್ಣ ಮನಸ್ಸನ್ನು ತೋರಿಸುತ್ತದೆ.ದೇವರ ಪ್ರತಿಮೆ ಮಾಡಲು ಅಡ್ಡಿ ಮಾಡುವ ಇವರ ಮನೋಭಾವಕ್ಕೆ ಏನು ಹೇಳಬೇಕು? ಶಾಂತಿ ಸಂದೇಶ ಸಾರಲು ಏಸು ಪ್ರತಿಮೆ ನಿರ್ಮಿಸಲಾಗುತ್ತಿದೆ. ಕ್ರೈಸ್ತ ಸಮುದಾಯವರ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಸಮಾಜಕ್ಕೆ ಪೂರಕವಾಗಿದೆ. ಕ್ರೈಸ್ತ ಸಮುದಾಯವರು ಯಾವುದನ್ನೂ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದರು.
ದೇಶಭಕ್ತಿ ಎಂದು ಹೇಳುವವರು ನಿರ್ಗತಿಕರನ್ನು ನೋಡೋದಿಲ್ಲ, ಕಲ್ಲಡ್ಕ ಪ್ರಭಾಕರ್ ಭಟ್ ಅಲ್ಲಿನ ಸೋದರತೆ ಹಾಳು ಮಾಡುವ ಉದ್ದೇಶದಿಂದ ಹೋಗಿದ್ದಾರೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಣ ಮಾಡುವ ಅಗತ್ಯತೆ ಏನಿತ್ತು, ದಕ್ಷಿಣ ಕನ್ನಡ ಜಿಲ್ಲೆಯವರ ನೆಮ್ಮದಿ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು. ಕನಕಪುರ,ಬೆಂಗಳೂರಿನವರು ಆದ್ರೂ ಶಾಂತಿಯಿಂದ ನೆಮ್ಮದಿಯಿಂದ ಇರಲಿ, ಇಲ್ಲಿ ನಾವು ನರಕ ಅನುಭವಿಸುತ್ತಿರೋದು ಸಾಕು ಎಂದು ಹೇಳಿದರು.