ಮಂಗಳೂರು, ಜ 13 (DaijiworldNews/SM): ಮೇಯರ್ ಚುನಾವಣೆ ನವೆಂಬರ್ 12ರಂದು ನಡೆದು ಫಲಿತಾಂಶ ಬಂದು 2 ತಿಂಗಳು ಕಳೆದರೂ ಮಹಾನಗರ ಪಾಲಿಕೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಇನ್ನೂ ನದೆಯದ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಮರೀಚಿಕೆಯಾಗಿದೆ.
21ನೇ ಅವಧಿಗೆ ಬಂದಿರುವ ಮೀಸಲಾಯಿಯಂತೆ ಮೇಯರ್, ಉಪಮೇಯರ್ ಆಯ್ಕೆ ನಡೆಯಬೇಕಿತ್ತು. ಆದರೆ, ಪಾಲಿಕೆಯಲ್ಲಿ ಬಹುಮತ ಪಡೆದುಕೊಂಡಿರುವ ಬಿಜೆಪಿ ಪಕ್ಷ ಮಾತ್ರ ಮೀನಾಮೇಷ ಎಣಿಸುತ್ತಿದೆ. ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ನಗರದಲ್ಲಿ ಭಾರೀ ಹೊಡೆತ ಬಿದ್ದಂತಾಗಿದೆ. ಈ ಹಿಂದೆ ವರ್ಷಗಳ ಕಾಲ ಪಾಲಿಕೆಯ ಮೀಸಲಾತಿ ವಿಚಾರದಿಂದಾಗಿ ಪ್ರಕರಣ ಕೋರ್ಟ್ ನಲ್ಲಿತ್ತು. ಇದರಿಂದಾಗಿ ಚುನಾವಣೆ ನಡೆಯದೆ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಇದೀಗ ಚುನಾವಣೆ ನಡೆದಿದೆ ಒಂದು ಪಕ್ಷ ಭಾರೀ ಬಹುಮತ ಪಡೆದುಕೊಂಡಿದ್ದರೂ, ಆಡಳಿತ ನಡೆಸಲು ಮುಂದಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕೂಡ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೊಳಿಸುವಂತೆ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಕಾರ್ಪೋರೇಟರ್ ಶಶಿಧರ ಹೆಗ್ಡೆ, ಪಾಲಿಕೆಯಲ್ಲಿ ಪರಿಷತ್ತಿನ ಆಡಳಿತ ಇಲ್ಲದೆ ಸಮಸ್ಯೆಯಾಗಿದೆ. ಚುನಾವಣೆ ನಡೆದು ಎರಡು ತಿಂಗಳು ಕಳೆದಿದೆ. ಚುನಾಯಿತ ಪಾಲಿಕೆ ಸದಸ್ಯರ ಪ್ರಮಾಣ ವಚನ ಇನ್ನೂ ಆಗಿಲ್ಲ. ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ನಗರ ಪಾಲಿಕೆಯಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿದೆ. ಪ್ರತಿಯೊಂದು ಇಲಾಖೆ ಜಡ್ಡುಗಟ್ಟುತ್ತಿದೆ. ನಗರ ಪಾಲಿಕೆ ಸದಸ್ಯರು ಅವರ ವಾರ್ಡಿನಲ್ಲಿ ಸಂಬಂಧಪಟ್ಟ ಸಮಸ್ಯೆಗಳನ್ನೂ ಬಗೆಹರಿಸದಂತಾಗಿದೆ. ಒಳಚರಂಡಿ, ನೀರಿನ ಸಮಸ್ಯೆ, ರಸ್ತೆ, ವಿದ್ಯುತ್ ಸಮಸ್ಯೆಗಳು ಹೆಚ್ಚಾಗಿದ್ದು, ಇದನ್ನು ಬಗೆಹರಿಸಲು ಪರಿಷತ್ತಿನ ಆಡಳಿತ ಅಗತ್ಯವಾಗಿ ಬೇಕಾಗಿದೆ ಎಂದರು.