ಮಂಗಳೂರು, ಜ 13 (DaijiworldNews/SM): ಪೌರತ್ವ ಕಾಯ್ದೆ ನೋಂದಣಿಗೆ ಜಿಲ್ಲೆಯ ಆರೋಗ್ಯ ಕೇಂದ್ರ, ಶಾಲೆ-ಕಾಲೇಜುಗಳ ಸಹಿತ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಥವಾ ಆಶಾ ಕಾರ್ಯಕರ್ತರ ಮೂಲಕ ಯಾರನ್ನೂ ನೇಮಿಸಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಪೌರ ಸಮನ್ವಯ ಸಮಿತಿಯ ನಿಯೋಗ ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದ ಸಂದರ್ಭ ನಿಯೋಗಕ್ಕೆ ಮಾಹಿತಿ ನೀಡಿದರು.
ಜನರು ಆತಂಕ ಪಡುವ ಅಗತ್ಯ ವಿವಿಧ ಯೋಜನೆಗಳ ಬಗ್ಗೆ ಫೋಟೋ ತೆಗೆಯುವ ಮೊದಲು ಸೂಕ್ತ ಮಾಹಿತಿ ನೀಡುವಂತೆ ಈಗಾಗಲೇ ಆದೇಶಿಸಲಾಗಿದ್ದು, ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಹೇಳಿಕೆ ಕೊಡುವುದಾಗಿ ತಿಳಿಸಿದರು.
ಜಿಲ್ಲೆಯ ವಿವಿಧೆಡೆಗಳಲ್ಲಿ ಕೆಲವು ದಿನಗಳಿಂದ ವರದಿಯಾಗುತ್ತಿರುವ ಚಿಕಿತ್ಸೆಗಾಗಿ ಬಂದವರ ಫೋಟೋ ತೆಗೆಯುವುದು ಮತ್ತು ಮೊಬೈಲ್ ನಂಬರ್ ಪಡೆಯುವುದು ಹಾಗೂ ಮಿಸ್ಡ್ ಕಾಲ್ ಕೊಡುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಉಳ್ಳಾಲ ನಗರ ಸಮೂದಾಯ ಆರೋಗ್ಯ ಕೇಂದ್ರದಲ್ಲಿ, ಕೆಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗೆ ಬಂದ ಮುಸ್ಲಿಮ್ ಮಹಿಳೆಯರ ಫೋಟೋ ತೆಗೆದ ವಿಷಯ ತಿಳಿದು ಗುಂಪು ಸೇರಿ ಪ್ರತಿಭಟನೆ ನಡೆಸಿದ ಬಗ್ಗೆ ಪೌರ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ನಿಯೋಗದಲ್ಲಿ ಮುಖಂಡರಾದ ಫಾರೂಕ್ ಉಳ್ಳಾಲ್, ಯೂಸುಫ್ ಉಳ್ಳಾಲ್, ಮುಸ್ತಫಾ ಎವರೆಸ್ಟ್, ಯು.ಕೆ.ಅಬ್ಬಾಸ್ ಕೋಟೇಪುರ, ಯು.ಎಚ್. ಫಾರೂಕ್, ನಾಝಿಂ ಉಳ್ಳಾಲ್, ಹಮೀದ್ ಉಳ್ಳಾಲ್, ನಝೀರ್ ಕೋಡಿ, ಅಕ್ರಮ್ ಹಸನ್, ಅಶ್ರಫ್ ಬಾವ ಕೋಡಿ, ಅಶ್ಗರ್ ಅಲಿ, ನವಾಝ್ ಕೋಟೆಪುರ ಮುಂತಾದವರು ಉಪಸ್ಥಿತರಿದ್ದರು.