ಪೊಳಲಿ,ಸೆ16: ಇತಿಹಾಸ ಪ್ರಸಿದ್ಧ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಳದ ಜೀರ್ಣೋದ್ಧಾರ ಕಾರ್ಯಗಳು ತ್ವರಿತ ಗತಿಯಿಂದ ಸಾಗುತಿದ್ದು, ಈ ನಡುವೆ ಕಾಮಗಾರಿ ಸಂದರ್ಭ ಅಪೂರ್ವವಾದ ಶಿಲಾಶಾಸನವೊಂದು ಪತ್ತೆಯಾಗಿದೆ. ದೇವಾಲಯದ ಗರ್ಭಗೃಹದ ಹೊರಗೆ ಎಡಭಾಗದಲ್ಲಿ ಈ ಶಾಸನ ಪತ್ತೆಯಾಗಿದ್ದು ಸುಮಾರು 38 ಎತ್ತರ ಹಾಗೂ ಮೇಲ್ಭಾಗದಲ್ಲಿ ಸುಮಾರು 24 ಅಗಲವಿರುವ, ಸುಂದರವಾಗಿ ರೂಪಿಸಲಾದ ಈ ಶಿಲಾಫಲಕದಲ್ಲಿ ಅಕ್ಷರಗಳನ್ನು 20 ಸಾಲುಗಳಲ್ಲಿ ಅತ್ಯಂತ ಸ್ಪುಟವಾಗಿ ಕೆತ್ತಲಾಗಿದೆ.
ಶಾಸನ ಫಲಕದ ತಳಭಾಗದಲ್ಲಿ ಎರಡು ಸಿಂಹಗಳ ನಡುವಿನಲ್ಲಿ ಒರ್ವ ವ್ಯಕ್ತಿಯು ರಾಜಭಂಗಿಯಲ್ಲಿ ಸ್ತ್ರೀಯೊಬ್ಬಾಕೆಯೊಂದಿಗೆ ಆಸೀನನಾಗಿರುವ ಚಿತ್ರಣವಿದೆ. ಕುಲಶೇಖರ ಪಾಂಡ್ಯ ಪಟ್ಟಿಗ ದೇವನ ಈ ಶಾಸನವು ಆಳುಪಯುಗದ ತುಳುನಾಡಿನ ಇತಿಹಾಸದ ಒಂದು ಮಹತ್ವಪೂರ್ಣ ದಾಖಲೆ ಎಂದು ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ಟ ಅಭಿಪ್ರಾಯಪಟ್ಟಿದ್ದಾರೆ.