ಮಂಗಳೂರು, ನ.25 (DaijiworldNews/AA): ವಂದೇ ಭಾರತ್ ರೈಲಿನಲ್ಲಿ ಕಳೆದುಹೋಗಿದ್ದ ಸುಮಾರು 50,000 ರೂ. ಮೌಲ್ಯದ ಚಿನ್ನದ ಬ್ರೇಸ್ಲೆಟ್ನ ವಾರಸುದಾರರನ್ನು ಪತ್ತೆಹಚ್ಚಿ, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಿತವಾಗಿ ಹಿಂದಿರುಗಿಸುವ ಮೂಲಕ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ದಳ (ಆರ್ಪಿಎಫ್) ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ನವೆಂಬರ್ 17 ರಂದು ತಿರುವನಂತಪುರಂ-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪಿದ ನಂತರ, ಸಿ-15 ಬೋಗಿಯಲ್ಲಿ ಈ ಚಿನ್ನದ ಬ್ರೇಸ್ಲೆಟ್ ಪತ್ತೆಯಾಗಿತ್ತು. ಯಾರೂ ಅದನ್ನು ಕೇಳಿಕೊಂಡು ಬಾರದ ಕಾರಣ, ಆರ್ಪಿಎಫ್ ಸಿಬ್ಬಂದಿ ಬ್ರೇಸ್ಲೆಟ್ ಅನ್ನು ಸುರಕ್ಷಿತವಾಗಿ ಆರ್ಪಿಎಫ್ ಠಾಣೆಯಲ್ಲಿ ಇರಿಸಿದ್ದರು.
ಆಭರಣ ಪತ್ತೆಯಾದ ಬಳಿಕ, ಆರ್ಪಿಎಫ್ ಇನ್ಸ್ಪೆಕ್ಟರ್ ಅವರು ಸಂಬಂಧಪಟ್ಟ ರೈಲ್ವೆ ವಿಭಾಗಗಳು ಮತ್ತು ಸರ್ಕಾರಿ ರೈಲ್ವೆ ಪೊಲೀಸರನ್ನು ಸಂಪರ್ಕಿಸಿ, ಚಿನ್ನಾಭರಣ ಕಾಣೆಯಾಗಿರುವ ಬಗ್ಗೆ ಯಾವುದಾದರೂ ದೂರು ದಾಖಲಾಗಿದೆಯೇ ಎಂದು ವಿಚಾರಿಸಿದ್ದರು. ಯಾವುದೇ ದೂರು ದಾಖಲಾಗದ ಕಾರಣ, ಆ ಬೋಗಿಯಲ್ಲಿ ಪ್ರಯಾಣಿಸಿದ ಪ್ರಯಾಣಿಕರನ್ನು ಗುರುತಿಸಲು ರೈಲಿನ ಮೀಸಲಾತಿ ಪಟ್ಟಿಯನ್ನು ಪರಿಶೀಲಿಸಲಾಯಿತು.
ಐಆರ್ಸಿಟಿಸಿ ಮೂಲಕ ಪಡೆದ ಪ್ರಯಾಣಿಕರ ವಿವರಗಳನ್ನು ಬಳಸಿಕೊಂಡು ಆರ್ಪಿಎಫ್ ಸಿಬ್ಬಂದಿ ಎರ್ನಾಕುಲಂನಿಂದ ಮಂಗಳೂರು ಸೆಂಟ್ರಲ್ಗೆ ಪ್ರಯಾಣಿಸಿದ್ದ ರಜನಿ ಮನೋಹರ್ ನಾಯಕ್ ಅವರನ್ನು ಪತ್ತೆಹಚ್ಚಿ ಸಂಪರ್ಕಿಸಿದರು. ಈ ವೇಳೆ, ಪ್ರಯಾಣದ ಸಂದರ್ಭದಲ್ಲಿ ತಮ್ಮ ಚಿನ್ನದ ಬ್ರೇಸ್ಲೆಟ್ ಕಾಣೆಯಾಗಿರುವುದನ್ನು ಅವರು ಖಚಿತಪಡಿಸಿದರು. ಆದರೆ, ಅದು ಎಲ್ಲಿ ಕಳೆದುಹೋಗಿದೆ ಎಂಬುದು ತಿಳಿಯದ ಕಾರಣ ತಾವು ದೂರು ನೀಡಿರಲಿಲ್ಲ ಎಂದು ತಿಳಿಸಿದರು.
ಬ್ರೇಸ್ಲೆಟ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ರಜನಿ ಅವರು ನವೆಂಬರ್ 24 ರಂದು ಮಧ್ಯಾಹ್ನ 2.30ರ ಸುಮಾರಿಗೆ ಮಂಗಳೂರು ಸೆಂಟ್ರಲ್ನಲ್ಲಿರುವ ಆರ್ಪಿಎಫ್ ಠಾಣೆಗೆ ಭೇಟಿ ನೀಡಿದರು. ಸೂಕ್ತ ಪರಿಶೀಲನೆ ಮತ್ತು ಮಾಲೀಕತ್ವವನ್ನು ಖಚಿತಪಡಿಸಿಕೊಂಡ ನಂತರ, ಸುಮಾರು 50,000 ರೂ. ಮೌಲ್ಯದ ಬ್ರೇಸ್ಲೆಟ್ ಅನ್ನು ಸ್ವೀಕೃತಿ ಪತ್ರದೊಂದಿಗೆ ಅವರಿಗೆ ಹಸ್ತಾಂತರಿಸಲಾಯಿತು.
ಕಳೆದುಹೋಗಿದ್ದ ತಮ್ಮ ಆಭರಣವನ್ನು ಪತ್ತೆಹಚ್ಚಿ ಹಿಂದಿರುಗಿಸುವಲ್ಲಿ ಆರ್ಪಿಎಫ್ ಸಿಬ್ಬಂದಿ ತೋರಿದ ಕ್ಷಿಪ್ರ ಕಾರ್ಯಾಚರಣೆ ಮತ್ತು ಸಮರ್ಪಣಾ ಮನೋಭಾವಕ್ಕೆ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಮಂಗಳೂರು ಸೆಂಟ್ರಲ್ ಆರ್ಪಿಎಫ್ ತಂಡದ ಈ ಕಾರ್ಯವನ್ನು ನೈಋತ್ಯ ರೈಲ್ವೆ ಶ್ಲಾಘಿಸಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ಅವರ ವಸ್ತುಗಳ ರಕ್ಷಣೆಗೆ ತಾನು ಸದಾ ಬದ್ಧವಾಗಿರುವುದಾಗಿ ಸಾಬೀತು ಮಾಡಿದೆ.