ಉಡುಪಿ, ನ.25 (DaijiworldNews/AA): ಟಿಕೆಟ್ ರಹಿತ ಮತ್ತು ಅನಧಿಕೃತ ಪ್ರಯಾಣಕ್ಕೆ ಕಡಿವಾಣ ಹಾಕುವ ಹಾಗೂ ಅಧಿಕೃತ ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ತನ್ನ ಮಾರ್ಗದಾದ್ಯಂತ ಟಿಕೆಟ್ ತಪಾಸಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

2026ರ ಏಪ್ರಿಲ್ 1ರಿಂದ ಅಕ್ಟೋಬರ್ ಅವಧಿಯಲ್ಲಿ ಕೊಂಕಣ ರೈಲ್ವೆ ಒಟ್ಟು 6,316 ವಿಶೇಷ ಟಿಕೆಟ್ ತಪಾಸಣಾ ಕಾರ್ಯಾಚರಣೆಗಳನ್ನು ನಡೆಸಿದ್ದು, 2,62,937 ಅನಧಿಕೃತ ಹಾಗೂ ನಿಯಮಬಾಹಿರ ಪ್ರಯಾಣದ ಪ್ರಕರಣಗಳನ್ನು ಪತ್ತೆಹಚ್ಚಿದೆ. ಈ ಕಾರ್ಯಾಚರಣೆಗಳ ಮೂಲಕ ರೈಲ್ವೆ ದರ ಮತ್ತು ದಂಡದ ರೂಪದಲ್ಲಿ ಬರೋಬ್ಬರಿ 17.31 ಕೋಟಿ ರೂ. ವಸೂಲಿ ಮಾಡಲಾಗಿದೆ.
ದೈನಂದಿನ ತಪಾಸಣೆಯ ಜೊತೆಗೆ, ಕಳೆದ ಅಕ್ಟೋಬರ್ ತಿಂಗಳೊಂದರಲ್ಲೇ 890 ವಿಶೇಷ ಟಿಕೆಟ್ ತಪಾಸಣಾ ಅಭಿಯಾನಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ 29,536 ಅನಧಿಕೃತ ಪ್ರಯಾಣ ಪ್ರಕರಣಗಳನ್ನು ಪತ್ತೆಹಚ್ಚಿ, ದರ ಮತ್ತು ದಂಡದ ರೂಪದಲ್ಲಿ 2.15 ಕೋಟಿ ರೂ. ಸಂಗ್ರಹಿಸಲಾಗಿದೆ.
ಮುಂಬರುವ ಕ್ರಿಸ್ಮಸ್ ರಜಾದಿನಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ, ತನ್ನ ಮಾರ್ಗದಾದ್ಯಂತ ಟಿಕೆಟ್ ತಪಾಸಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ಅನಧಿಕೃತ ಪ್ರಯಾಣವನ್ನು ತಡೆಯಲು ಮತ್ತು ಎಲ್ಲಾ ನೈಜ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣ ಒದಗಿಸಲು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಮತ್ತು ರೈಲ್ವೆ ಅಧಿಕಾರಿಗಳ ಸಮನ್ವಯದೊಂದಿಗೆ ಈ ತೀವ್ರ ತಪಾಸಣಾ ಕಾರ್ಯಾಚರಣೆ ನಡೆಯಲಿದೆ.
ಪ್ರಯಾಣದ ವೇಳೆ ಎದುರಾಗುವ ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಮಾನ್ಯವಾದ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕು ಮತ್ತು ತಪಾಸಣೆಯ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.