ಮಂಗಳೂರು, ಜ 15 (Daijiworld News/ MB) : ಮಂಗಳೂರು ವಿಮಾನ ನಿಲ್ದಾಣದ ಏರ್ ಕಾರ್ಗೊ ಕಾಂಪ್ಲೆಕ್ಸ್ನಲ್ಲಿ ಯಂತ್ರೋಪಕರಣ ಹೆಸರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಉಡುಪಿಯ ಮೆಸರ್ಸ್ ಸ್ವರೂಪ್ ಮಿನರಲ್ ಪ್ರೈ.ಲಿ. ಎಂಬ ಕಂಪೆನಿಯ ಮನೋಹರ್ ಕುಮಾರ್ ಪೂಜಾರಿ ಮತ್ತು ಮಂಗಳೂರಿನ ಅಶೋಕನಗರ ನಿವಾಸಿ ಲೋಹಿತ್ ಶ್ರೀಯಾನ್ ಅವರನ್ನು ಬಂಧನ ಮಾಡಲಾಗಿದೆ.
ಇದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ದಶಕದ ಅವಧಿಯಲ್ಲಿ ವಶಪಡಿಸಿಕೊಂಡ ಅತೀಹೆಚ್ಚು ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪ್ರಕರಣ ಇದಾಗಿದ್ದು ಸರಕು ಸಾಗಾಟ ಮಾಡುವ ಹೆಸರಿನಲ್ಲಿ ಚಿನ್ನವನ್ನು ಯಂತ್ರದ ಸರಪಣಿಯಲ್ಲಿ ಅಡಗಿಸಿಟ್ಟು ಸಾಗಾಟ ಮಾಡಲಾಗುತ್ತಿತ್ತು.
ಮೆಸರ್ಸ್ ಸ್ವರೂಪ್ ಮಿನರಲ್ ಪ್ರೈ.ಲಿ. ಎಂಬ ಸಂಸ್ಥೆಯ ಮೈನಿಂಗ್ ಕನ್ವೇಯರ್ ಡ್ರೈವ್ ಚೈನ್ ಆಮದು ಮಾಡುವ ಸಂದರ್ಭದಲ್ಲಿ ಅದರೊಳಗೆ ಚಿನ್ನವನ್ನು ಅಡಗಿಸಿಟ್ಟು ಸಾಗಾಟ ಮಾಡಲಾಗುತ್ತಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ಈ ಕುರಿತು ತೀವ್ರ ನಿಗಾ ವಹಿಸಿದ್ದರು.
ಬೆಂಗಳೂರು ಹಾಗೂ ಮಂಗಳೂರು ಡಿಆರ್ಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು ಆರೋಪಿ ಮನೋಹರ್ ಕುಮಾರ್ನನ್ನು ಬೆಂಗಳೂರಿನಲ್ಲಿ ಹಾಗೂ ಆರೋಪಿ ಲೋಹಿತ್ನನ್ನು ಮಂಗಳೂರಿನಲ್ಲಿ ಬಂಧನ ಮಾಡಿದ್ದಾರೆ.
ಈ ಚಿನ್ನವನ್ನು ಗಣಿ ಉದ್ಯಮದಲ್ಲಿ ಬಳಸುವ ಲೋಹದ ಮೈನಿಂಗ್ ಕನ್ವೇಯರ್ ಡ್ರೈವ್ ಚೈನ್ ಎಂಬ ಹೆಸರಿನ ಸರಕಿನ ಒಳಭಾಗದಲ್ಲಿ ಸರಪಣಿಯ ಉಬ್ಬಿನೊಳಗೆ ತುಂಬಿಸಿಡಲಾಗಿತ್ತು. ಆಮದು ಮಾಡಿರುವ ವಸ್ತುಗಳ ಸ್ಕ್ಯಾಂನಿಂಗ್ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಶಂಕೆ ಮೂಡಿದ್ದು ಪರಿಶೀಲನೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 24 ಕ್ಯಾರೆಟ್ ಗುಣಮಟ್ಟದ ಒಟ್ಟು 4.995 ಕೆ.ಜಿ. ಚಿನ್ನವನ್ನು ಸರಪಣಿಯ ಉಬ್ಬಿನೊಳಗೆ ಐದು ವೃತ್ತಾಕಾರದ ಚಿನ್ನದ ತಟ್ಟೆಗಲಾಗಿ ಅಡಗಿಸಿಟ್ಟುಕೊಂಡಿದ್ದು ಅಧಿಕೃತ ಚಿನ್ನದ ವ್ಯಾಪಾರಿಗಳಿಂದ ಪರಿಶೀಲನೆ ನಡೆಸಿದ ಬಳಿಕ ಚಿನ್ನವೆಂದು ಖಚಿತವಾಗಿದೆ.