ಮಂಗಳೂರು, ಜ 15 (Daijiworld News/ MB) : ವಿಶ್ವ ಪರ್ಯಟನೆಗೆಂದು ಹೊರಟಿದ್ದ ಜರ್ಮನ್ ದಂಪತಿಗಳು ತಮ್ಮ ವಾಹನ ಕೆಟ್ಟು, ಕಸ್ಟಮ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಹನದ ಬಿಡಿ ಭಾಗ ದೊರೆಯುವಲ್ಲಿ ವಿಳಂಬವಾಗಿದ್ದು ಈ ಕುರಿತು ದಾಯ್ಜಿವರ್ಲ್ಡ್ ಮಾಡಿದ ವರದಿಯ ಪರಿಣಾಮ ಸಮಸ್ಯೆ ಪರಿಹಾರವಾಗಿದ್ದು ಜರ್ಮಿನ್ ದಂಪತಿಗಳು ಮಂಗಳೂರಿನಿಂದ ವಿಶ್ವಪರ್ಯಟನೆ ಮುಂದುವರೆಸಿದ್ದಾರೆ.
ವಾಹನದ ಬಿಡಿ ಭಾಗ ದೊರಕುವಲ್ಲಿ ವಿಲಂಬವಾದ ಹಿನ್ನಲೆಯಲ್ಲಿ ಈ ದಂಪತಿಗಳು ಕಳೆದ ಮೂರು ವಾರಗಳಿಂದ ಮಂಗಳೂರಿನಲ್ಲೇ ನೆಲೆಸಬೇಕಾಗಿತ್ತು. ಈಗ ಜರ್ಮನ್ ಮೂಲದ ಪೀಟರ್ ಪಾವ್ಲಸೇಕ್ ಹಾಗೂ ಅನೋನಾ ಈಗ ತಮ್ಮ ವಿಶ್ವ ಪರ್ಯಟನೆಯನ್ನು ಮುಂದುವರೆಸಲಿದ್ದು ಜ. 15 ರಂದು ಮಂಗಳೂರಿನಿಂದ ಕೇರಳದತ್ತ ಸಾಗಲಿದ್ದಾರೆ. ಬಳಿಕ ಮಯನ್ಮಾರ್, ಥೈಲ್ಯಾಂಡ್, ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ದೇಶಗಳಿಗೆ ತೆರಳಲಿದ್ದಾರೆ.
ವಾಹನದ ಬಿಡಿಭಾಗವನ್ನು ಪೀಟರ್ ಪಾವ್ಲಸೇಕ್ ಆರ್ಡರ್ ಮಾಡಿದ ಬಳಿಕ ಒಂದು ತಿಂಗಳಾಗುತ್ತಾ ಬಂದರು ದೊರೆಯದ ಹಿನ್ನಲೆಯಲ್ಲಿ ಜ. 2 ರಂದು ಇನ್ನೊಂದು ಬಾರಿ ವಾಹನದ ಬಿಡಿ ಭಾಗಕ್ಕಾಗಿ ಆರ್ಡರ್ ಮಾಡಿದ್ದರು. ಈಗ ಜ.14ರಂದು ಈ ಎರಡು ಪಾರ್ಸೆಲ್ಗಳು ಒಂದೇ ಬಾರಿಗೆ ತಲುಪಿದೆ.
ಜ.12 ರಂದು ದಾಯ್ಜಿವರ್ಲ್ಡ್ ಜರ್ಮನ್ ದಂಪತಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ಮಾಡಿತ್ತು. ಬಳಿಕ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ದಾಯ್ಜಿವರ್ಲ್ಡ್ ಸಹಕಾರ ಮಾಡಿತ್ತು. ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಈ ಸಮಸ್ಯೆಯ ಬಗ್ಗೆ ದಾಯ್ಜಿವರ್ಲ್ಡ್ ತಿಳಿಸಿದ ಬಳಿಕ ಶಾಸಕರು ಕಸ್ಟಮ್ ಅಧಿಕಾರಿಯೊಬ್ಬರ ಜೊತೆ ಹಾಗೂ ಸಿವಿಲ್ ಕಂಸ್ಟ್ರಕ್ಷನ್ ಬಿಝ್ನೆಸ್ನ ಬಿ. ಪೂರ್ಣಜಿತ್ ರಾಯ್ ಅವರ ಬಳಿ ಮಾತನಾಡಿ ಅಗತ್ಯವಿರುವ ಸಾಮಾಗ್ರಿಗಳನ್ನು ಶೀಘ್ರವೇ ಒದಗಿಸುವಂತೆ ಒತ್ತಾಯ ಮಾಡಿದ್ದರು.
ಇದಾದ ಬಳಿಕ ಎರಡು ದಿನಗಳಲ್ಲಿ ಪೀಟರ್ ಅವರಿಗೆ ವಾಹನದ ಬಿಡಿಭಾಗಗಳನ್ನು ತಲುಪಿಸಲಾಗಿದ್ದು ಕಣ್ಣೂರಿನ ಮರ್ಸಿಡಿಸ್ ಬೆನ್ಝ್ ಶೋರೂಂನಲ್ಲಿ ವಾಹನದ ಬಿಡಿಭಾಗಗಳನ್ನು ಜೋಡಿಸಲಾಗಿದ್ದು ಈ ದಂಪತಿಗಳು ವಿಶ್ವ ಪರ್ಯಟನೆಯನ್ಜು ಮುಂದುವರೆಸಲಿದ್ದಾರೆ.
ಈ ಕುರಿತು ಸಹಾಯ ಮಾಡಿ ವಾಹನದ ಬಿಡಿ ಭಾಗಗಳನ್ನು ಅತೀ ಶೀಘ್ರವಾಗಿ ದೊರಕಿಸಿದ ಶಾಸಕ ವೇದವ್ಯಾಸ್ ಕಾಮತ್ ಹಾಗೂ ದಾಯ್ಜಿವರ್ಲ್ಡ್ಗೆ ಜರ್ಮನ್ನ ಈ ದಂಪತಿಗಳು ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ತಮಗೆ ಸಹಾಯ ಮಾಡಿದ ಕಣ್ಣೂರು ಬೆನ್ಸ್ ಶೋರೂಂನ ಸಿಬ್ಬಂದಿಗಳಿಗೆ ಹಾಗೂ ತಾವು ತಂಗಿದ್ದ ಹೊಟೇಲ್ ವ್ಯವಸ್ಥಾಪಕ ಜಯ ಪ್ರಕಾಶ್ ಮತ್ತು ಇತರ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆ ತಿಳಿಸಿದ್ದಾರೆ. ಏತನ್ಮಧ್ಯೆ, ಕಣ್ಣೂರಿನಲ್ಲಿರುವ ಬೆನ್ಜ್ ಶೋ ರೂಂನಲ್ಲಿ ಹಾಗೂ ಹೊಟೇಲ್ನಲ್ಲಿ ಈ ದಂಪತಿಗಳಿಗೆ ಸನ್ಮಾನ ಮಾಡಲಾಗಿದೆ.
ವಿಶ್ವ ಪರ್ಯಟನೆ ನಡೆಸುತ್ತಿರುವ ಈ ಜರ್ಮನಿ ದಂಪತಿಗಳು ಡಿ.19 ರಂದು ಮಂಗಳೂರಿಗೆ ಬಂದಿದ್ದರು. ದುರದೃಷ್ಟವಶಾತ್, ಅವರು ನಗರವನ್ನು ಪ್ರವೇಶಿಸಿದ ಸ್ವಲ್ಪ ಸಮಯದಲ್ಲೇ ವಾಹನದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡಿದ್ದು ಬಿಡಿ ಭಾಗ ದೊರಕುವಲ್ಲಿ ವಿಳಂಬವಾದ ಹಿನ್ನಲೆಯಲ್ಲಿ ಈ ದಂಪತಿಗಳು ಮಂಗಳೂರಿನಲ್ಲಿಯೇ ಉಳಿಯಬೇಕಾಯಿತು.
ಬೆನ್ಸ್ ಶೋರೂಂ ಬಿಡಿಭಾಗಗಳನ್ನು ಶೀಘ್ರವಾಗಿ ಪಡೆಯಲು ತಮ್ಮ ಹೆಸರಿನಲ್ಲಿ ಆರ್ಡರ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಪಾವ್ಲಾಸೆಕ್ ಅವರು ಡಿ. 20 ರಂದು ಎಸ್ಟೋನಿಯಾದಿಂದ 300ಯುರೋಗಳಿಗೆ ವಾಹನದ ಬಿಡಿ ಭಾಗವನ್ನು ಆರ್ಡರ್ ಮಾಡಿದ್ದರು. 2 ದಿನದಲ್ಲೇ ವಾಹನದ ಬಿಡಿ ಭಾಗ ಬೆಂಗಳೂರಿನ ವಿಮಾನ ನಿಲ್ದಾಣವನ್ನು ತಲುಪಿತ್ತು. ಕೊರಿಯರ್ ಮಾಡುವಾತ ಪೀಟರ್ ಅವರ ಹೆಸರನ್ನು ನಮೂದಿಸುವ ಬದಲು ಬೆನ್ಝ್ ಶೋರೂಂನ ಸಿಬ್ಬಂದಿಯ ಹೆಸರನ್ನು ನಮೂದಿಸಿದ್ದರು. ಆ ಹಿನ್ನಲೆಯಲ್ಲಿ ಪೀಟರ್ ಅವರು ವಾಹನದ ಬಿಡಿ ಭಾಗವನ್ನು ವಿಮಾನ ನಿಲ್ದಾಣದಿಂದ ಪಡೆಯಲು ಯಾವುದೇ ಆಕ್ಷೇಪವಿಲ್ಲ ಎಂದು ಶೋರೂಂನಿಂದ ಪತ್ರ ನೀಡಲಾಗಿತ್ತು. ಆದರೂ ಪೀಟರ್ ಅವರು ವಿಮಾನ ನಿಲ್ದಾಣಕ್ಕೆ ಹೋದಾಗ ಕಸ್ಟಮ್ ಸಿಬ್ಬಂದಿಗಳು ಅವರಿಗೆ ಹಲವಾರು ಕಾರಣಗಳನ್ನು ನೀಡಿ ವಾಹನದ ಬಿಡಿ ಭಾಗವನ್ನು ನೀಡಿರಲಿಲ್ಲ.
ಜ. 6 ರಂದು ಪೀಟರ್ ಅವರು ಕಸ್ಟಮ್ ಅಧಿಕಾರಿಯನ್ನು ಭೇಟಿಯಾಗಿ ಮಾತನಾಡಿ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ವಾಹನದ ಬಿಡಿ ಭಾಗವನ್ನು ಪಡೆಯುವಲ್ಲಿ ಯಾವುದೇ ಆಕ್ಷೇಪವಿಲ್ಲದ ಕುರಿತು ಪತ್ರ ನೀಡಿದ್ದರು. ಹಾಗೆಯೇ ವಾಹನದ ಬಿಡಿಭಾಗಗಳು ಅತೀ ಶೀಘ್ರವಾಗಿ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದರು.
ಸಂಬಂಧಪಟ್ಟ ವ್ಯಕ್ತಿಗಳಿಗೆ ಹಲವಾರು ದಾಖಲೆಗಳನ್ನು ಸಲ್ಲಿಸಿದರೂ ಅವರು ಸಾಮಾಗ್ರಿಗಳನ್ನು ಹಸ್ತಾಂತರಿಸಲು ನಿರಾಕರಣೆ ಮಾಡುತ್ತಿದ್ದರು. ಪೀಟರ್ ಅವರು ಡಿ. 30 ರಂದು ಹಾಗೂ ಜ. 6ರಂದು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದು ಸಾಮಾಗ್ರಿಗಳನ್ನು ಮಂಗಳೂರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದರು.
ಡಿಎಚ್ಎಲ್ನ ವಿನೋದ್ ಪ್ರಭು ಎಂಬ ವ್ಯಕ್ತಿಯು ಬಿಡಿಭಾಗ ನೀಡದೆ ಅಲೆದಾಡಿಸುತ್ತಿದ್ದ ಹಾಗೂ ನಿರಾಕರಿಸುತ್ತಿದ್ದ ಎಂದು ಪೀಟರ್ ಆರೋಪ ಮಾಡಿದ್ದಾರೆ. ಪೀಟರ್ ಅವರು ಎಲ್ಲಾ ದಾಖಲೆಗಳನ್ನು ನೀಡಿದರೂ ಸಾಮಗ್ರಿಗಳು ದೊರಕದ ಹಿನ್ನಲೆಯಲ್ಲಿ ಬೆನ್ಝ್ ಶೋರೂಂ ಮುಖೇನ 2000 ರೂಪಾಯಿ ದಂಡವನ್ನು ಕೂಡಾ ಪಾವತಿಸಿದ್ದಾರೆ.
ಜರ್ಮನಿಯ ಈ ದಂಪತಿಗಳು 2019ರ ಮೇ 1ರಿಂದ ತಮ್ಮ ಬೆನ್ಝ್ ವಾಹನದಲ್ಲಿ ವಿಶ್ವ ಪರ್ಯಟನೆ ಆರಂಭ ಮಾಡಿದ್ದು ಈವರೆಗೂ 15 ದೇಶಗಳಿಗೆ ಭೇಟಿ ನೀಡಿದ್ದಾರೆ. ಪೋಲೆಂಡ್, ಐಸ್ಲ್ಯಾಂಡ್, ರಷ್ಯಾ, ಮಂಗೋಲಿಯಾ, ಲಿಥುವೇನಿಯಾ, ಇರಾನ್, ಉಜ್ಬೇಕಿಸ್ತಾನ್, ತಜಿಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನಕ್ಕೆ ಭೇಟಿ ನೀಡಿದ ಈ ದಂಪತಿಗಳು ಬಳಿಕ ನ.24ರಂದು ಭಾರತಕ್ಕೆ ಬಂದಿದ್ದಾರೆ.
ಭಾರತದಲ್ಲಿ ದೆಹಲಿ ಹಾಗೂ ಆಗ್ರಾದಂತಹ ಸ್ಥಳಗಳಿಗೆ ಭೇಟಿ ನೀಡಿರುವ ಇವರು ವಾಹನ ದುರಸ್ತಿ ಮಾಡಿದ ಬಳಿಕ ಕೇರಳಕ್ಕೆ ಸಾಗಲಿದ್ದು ಆ ಬಳಿಕ ಮಯನ್ಮಾರ್, ಥೈಲ್ಯಾಂಡ್, ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ದೇಶಗಳಿಗೆ ತೆರಳಲಿದ್ದಾರೆ.