ಮಂಗಳೂರು: ಸಿಎಎ ವಿರುದ್ಧ ಅಡ್ಯಾರ್ ನಲ್ಲಿ ಬೃಹತ್ ಜಾಗೃತಿ ಸಮಾವೇಶ
Wed, Jan 15 2020 07:28:17 PM
ಮಂಗಳೂರು, ಜ 15 (DaijiworldNews/SM): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮುಸ್ಲಿಂ ಸೆಂಟ್ರಲ್ ಕಮಿಟಿ ನಗರದ ಹೊರವಲಯದ ಅಡ್ಯಾರ್ ನಲ್ಲಿ ಆಯೋಜಿಸಿದ್ದ ಜನ ಜಾಗೃತಿ ಸಮಾವೇಶಕ್ಕೆ ಬೃಹತ್ ಬೆಂಬಲ ವ್ಯಕ್ತವಾಗಿದೆ. ಬೃಹತ್ ಸಂಖ್ಯೆಯಲ್ಲಿ ಕಾಯ್ದೆ ವಿರೋಧಿಗಳು ಭಾಗವಹಿಸಿ ಸಮಾವೇಶಕ್ಕೆ ಬೆಂಬಲ ನೀಡಿದ್ದಾರೆ.
ಮಧ್ಯಾಹ್ನ 2.30ಕ್ಕೆ ಆರಂಭಗೊಂಡ ಸಮಾವೇಶ ಸಂಜೆ 6.30ಕ್ಕೆ ಸಮಾರೋಪಗೊಂಡಿತು. ಸಮಾವೇಶದಲ್ಲಿ ನೂರಾರು ಗಣ್ಯರು ಭಾಗವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದವರು, ಕಾಯ್ದೆಯ ಆಗುಹೋಗುಗಳ ಬಗ್ಗೆ ಜಾಗೃತಿ ಮೂಡಿಸಿದರು.
ಖಾಝಿಗಳಾದ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಅಲ್ಹಾಜ್ ಬೇಕಲ ಇಬ್ರಾಹಿಂ ಮುಸ್ಲಿಯಾರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಶಾಸಕ ಯುಟಿ ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಜೆ.ಆರ್. ಲೋಬೊ, ಎಸ್ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುಲ್ ರಶೀದ್ ಝೈನಿ, ಸಮಸ್ತ ಮುಶಾವರ ರಾಜ್ಯ ಕಾರ್ಯದರ್ಶಿ ಯುಕೆ ಅಬ್ದುಲ್ ಅಝೀಝ್ ದಾರಿಮಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಪಿಎಫ್ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಎಸ್ಕೆಎಸ್ಎಂ ದಾವಾ ಕಾರ್ಯದರ್ಶಿ ಎಂಜಿ ಮುಹಮ್ಮದ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮತ್ತಿತರರು ಭಾಗವಹಿಸಿದ್ದರು.
ಇನ್ನು ಜನ ಜಾಗೃತಿ ಸಮಾವೇಶಕ್ಕೆ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಸಂಪೂರ್ಣ ಬೆಂಬಲ ಘೋಷಿಸಿತ್ತು. ಸಮಾವೇಶದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು ಸೇರಿದಂತೆ ಎಲ್ಲಾ ಕಾರ್ಪೋರೇಟರ್ ಗಳು, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು, ಪಕ್ಷದ ಮುಖಂಡರು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್.ಎಸ್.ಯು.ಐ ಘಟಕ, ಸೇವಾದಳ, ಅಲ್ಪಸಂಖ್ಯಾತ ವಿಭಾಗ ಹಾಗೂ ಪಕ್ಷದ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಭಾಗವಹಿಸಿದ್ದರು.