ಮಂಗಳೂರು ಜ 29 : ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬಯಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷಕಾಣಿಸಿಕೊಂಡ ಪರಿಣಾಮ ರನ್ವೇಯಿಂದ ಮರಳಿದ ಘಟನೆ ಭಾನುವಾರ ನಡೆದಿದ್ದು ಏರ್ ಇಂಡಿಯಾ ಸಂಸ್ಥೆಯು ಪ್ರಯಾಣಿಕರನ್ನು ಸೋಮವಾರ ಮುಂಬಯಿಗೆ ಪಯಣಿಸುವ ವ್ಯವಸ್ಥೆ ಮಾಡಿದೆ. ಜ 28 ರ ಭಾನುವಾರ ಮಧ್ಯಾಹ್ನದ ಸುಮಾರಿಗೆ ಪ್ರಯಾಣಿಕರನ್ನು ಹೊತ್ತು ರನ್ವೇಯಲ್ಲಿ ವಿಮಾನ ಸಾಗಲಾರಂಭಿಸಿದಾಗ, ವಿಮಾನದ ಇಂಜಿನ್ ನಲ್ಲಿ ತಾಂತ್ರಿಕ ಲೋಪ ಕಂಡು ಬಂದಿತ್ತು. ತಕ್ಷಣ ವಿಮಾನ ರನ್ ವೇ ಯಿಂದ ನಿಲ್ದಾಣಕ್ಕೆ ವಾಪಸ್ಸಾಗಿದೆ. ವಿಮಾನದಲ್ಲಿ ಸುಮಾರು 116 ಪ್ರಯಾಣಿಕರಿದ್ದು, ಬಳಿಕ ನಗರದ ಹೊಟೇಲ್ ನಲ್ಲಿ ತಂಗಲು ಏರ್ ಇಂಡಿಯಾ ಕಂಪನಿ ವ್ಯವಸ್ಥೆ ಕಲ್ಪಿಸಿತು. ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷವನ್ನು ಸರಿಪಡಿಸಲು ಅಗತ್ಯವಾಗಿರುವ ಬಿಡಿಭಾಗವನ್ನು ಭಾನುವಾರ ರಾತ್ರಿಯೇ ಮುಂಬಯಿಯಿಂದ ಮಂಗಳೂರಿಗೆ ಬಂದ ವಿಮಾನದ ಮೂಲಕ ತರಿಸಲಾಗಿದೆ ಎನ್ನಲಾಗಿದ್ದು, ರಾತ್ರಿ ವೇಳೆ ದುರಸ್ತಿ ಕೆಲಸ ಕೈಗೆತ್ತಿಕೊಳ್ಳವ ಸಾಧ್ಯತೆ ಇದೆ.