ಮಂಗಳೂರು, ಜ 16(Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶವ್ಯಾಪ್ತಿ ಗೊಂದಲ ಸೃಷ್ಟಿಯಾಗಿದ್ದು, ಈ ಗೊಂದಲವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೇ ಬಗೆಹರಿಸುವ ಪ್ರಯತ್ನಗಳಾಗಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ನಗರದ ಸರ್ಕಿಟ್ ಹೌಸ್ ನಲ್ಲಿ ಜ ೧೬ ರ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ದೇಶಾದ್ಯಂತ ಗೊಂದಲ ಸೃಷ್ಟಿಯಾಗಿದ್ದು, ಪ್ರತಿ ರಾಜ್ಯದಲ್ಲಿ ಮುಖ್ಯಮಂತ್ರಿಗಳು, ಗೃಹಸಚಿವರು ಈ ಗೊಂದಲವನ್ನು ನಿವಾರಿಸುವ ಪ್ರಯತ್ನ ಮಾಡಲಿ ಎಂದು ಹೇಳಿದರು.
ಪೊಲೀಯೋ ಲಸಿಕೆಗಾಗಿ ಮನೆ ಮನೆಗೆ ಜಾಗೃತಿಗಾಗಿ ಆಶಾ ಕಾರ್ಯಕರ್ತೆಯರು ಅಥವಾ ಸರ್ಕಾರಿ ಅಧಿಕಾರಿಗಳು ತೆರಳಿದಾಗ ಜನ ಭಯದಿಂದ ಬಾಗಿಲು ತೆರೆಯದಂತಾಗಿದೆ. ಹೀಗಾಗಿ ಸ್ಥಳೀಯ ಆಡಳಿತ ವ್ಯವಸ್ಥೆಯಾದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ನಡೆಯಬೇಕಾಗಿದೆ. ಮುಖ್ಯಮಂತ್ರಿಗಳು ಕೂಡಾ ರಾಜ್ಯದ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಲಿ. ಜೊತೆಗೆ ರಾಜ್ಯ ಸರ್ಕಾರ, ಆಡಳಿತ ಮಂಡಳಿಗಳು, ಪತ್ರಕರ್ತರು ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾದ ಕೆಲಸ ಮಾಡಬೇಕಾಗಿದೆ ಎಂದರು.