ಮಂಗಳೂರು, ಜ 16 (Daijiworld News/MB) : ಪಾವೂರು ಹಿಂದೂ ರುದ್ರಭೂಮಿಗೆ ಹೋಗುವ ರಸ್ತೆ ದುರಸ್ತಿಯಲ್ಲಿದ್ದು ಕಾಮಗಾರಿ ಪೂರ್ಣಗೊಳ್ಳುವ ಸಂದರ್ಭ ರಸ್ತೆ ಸುಸಜ್ಜಿತಗೊಳಿಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಪಾವೂರು ಗ್ರಾಮದ ಕಿಲ್ಲೂರು ಎಂಬಲ್ಲಿ ನಿರ್ಮಾಣವಾಗಲಿರುವ ಹಿಂದೂ ರುದ್ರಭೂಮಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಹಿಂದಿನ ಸರ್ಕಾರ ಇದ್ದಾಗ ಪ್ರತಿ ಗ್ರಾಮದಲ್ಲೂ ಹಿಂದೂ ರುದ್ರಭೂಮಿ ನಿರ್ಮಾಣ ಕಡ್ಡಾಯ ಮಾಡಿ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಮಂಗಳೂರು ಕ್ಷೇತ್ರದ ಹೆಚ್ಚಿನ ಗ್ರಾಮಗಳಲ್ಲಿ ಹಿಂದುಗಳಿಗೆ ರುದ್ರಭೂಮಿ ಇದೆ, ಇದೀಗ ಪಾವೂರು ಗ್ರಾಮದಲ್ಲೂ ಗುದ್ದಲಿಪೂಜೆ ನಡೆದಿದ್ದು ಸರ್ವರ ಸಹಕಾರದಲ್ಲಿ ಶೀಘ್ರ ರುದ್ರಭೂಮಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಮುಸ್ಲಿಮರು, ಕ್ರೈಸ್ತರು ಮರಣ ಹೊಂದಿದಾಗ ದಫನ ಮಾಡಲು ಸಮಸ್ಯೆಯಿಲ್ಲ, ಆದರೆ ಹಿಂದೂಗಳು ಮರಣ ಹೊಂದಿದಾಗ ದಹನಕ್ಕೆ ಎಲ್ಲಿಗೂ ಕೊಂಡೊಯ್ಯಬೇಕಾಗಿದ್ದು ಬಡವರು ತುಂಬಾ ಕಷ್ಟ ಅನುಭವಿಸಬೇಕಾಗಿದೆ. ಇದನ್ನು ಮನಗಂಡು ಆರೂವರೆ ಎಕರೆ ಜಮೀನು ಇದ್ದು ಎರಡು ಎಕರೆ ರುದ್ರಭೂಮಿಗೆ ಮೀಸಲಿಡಲಾಗಿದೆ. ಉಳಿದ ಜಮೀನಿನಲ್ಲಿ ರುದ್ರಭೂಮಿ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗುವುದು ಎಂದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್ ಮಲಾರ್, ಸದಸ್ಯರಾದ ವಾಮನ್ ರಾಜ್ ಪಾವೂರು, ರೀಮಾ, ಎಂ.ಪಿ.ಹಸನ್, ಮಜೀದ್ ಸಾತ್ಕೋ, ಮಾಜಿ ಉಪಾಧ್ಯಕ್ಷ ದುಗ್ಗಪ್ಪ ಪೂಜಾರಿ, ಮಾಜಿ ಸದಸ್ಯ ಲಕ್ಷ್ಮಣ ಕೋಟ್ಯಾನ್, ಯೋಗೀಶ್ ಪಾವೂರು, ರುದ್ರಭೂಮಿ ನಿರ್ಮಾಣ ಸಮಿತಿ ಪದಾಧಿಕಾರಿಗಳಾದ ಶಂಕರಾನಂದ ಎನ್.ಇನವಳ್ಳಿ, ವೇಣುಗೋಪಾಲ ಕೊರ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಚಿತ್ತರಂಜನ್ ಭಂಡಾರಮನೆ, ಪ್ರಮುಖರಾದ ಉಗ್ಗಪ್ಪ ಪೂಜಾರಿ, ವಿಶ್ವನಾಥ ಶೆಟ್ಟಿ ಬೀಡು, ಪ್ರಭಾಕರ್ ಶೆಟ್ಟಿ ಕಿಲ್ಲೂರು ಇನ್ನಿತರರು ಉಪಸ್ಥಿತರಿದ್ದರು. ರುದ್ರಭೂಮಿ ಸಮಿತಿ ನಿರ್ಮಾಣ ಸಮಿತಿ ಅಧ್ಯಕ್ಷ ವಿವೇಕ್ ರೈ ಸ್ವಾಗತಿಸಿದರು.