ಮಂಗಳೂರು, ಜ 16 (DaijiworldNews/SM): ರಾ.ಹೆ 66ರ ಬೈಕಂಪಾಡಿಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಎನ್ಎಂಪಿಟಿ ನಿವೃತ್ತ ಉದ್ಯೋಗಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ ಸುಂದರ ಸಾಲ್ಯಾನ್ (70) ಮೃತಪಟ್ಟವರು.
ಇವರು ಪಣಂಬೂರು ನವ ಮಂಗಳೂರು ಬಂದರು ಮಂಡಳಿಯ ಮೆರೈನ್ ಭಾಗದಲ್ಲಿ ಅಪರೇಟರ್ ಆಗಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದರು. ಬೈಂಕಪಾಡಿಯಿಂದ ಕೃಷ್ಣಾಪುರದ ತನ್ನ ಮನೆಗೆ ತೆರಳಲು ಬಸ್ ಕಾಯುತ್ತಿದ್ದ ಸಂದರ್ಭ ಕೃಷ್ಣಾಪುರದತ್ತ ಚಲಿಸುತ್ತಿದ್ದ ಸಿಟಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಸುಂದರ ಸಾಲ್ಯಾನ್ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಬಸ್ಸಿನ ಚಾಲಕನ ಅತಿಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗಿದೆ. ರಸ್ತೆಬದಿಯಲ್ಲಿದ್ದ ಸುಂದರ ಸಾಲ್ಯಾನ್ಗೆ ಅತಿಯಾದ ವೇಗದಿಂದ ಬಂದ ಬಸ್ ಢಿಕ್ಕಿ ಹೊಡೆದಿದೆ. ಅಲ್ಲದೆ ಅವರನ್ನು ಸುಮಾರು ದೂರ ಎಳೆದೊಯ್ದಿದೆ. ಪರಿಣಾಮ ಸಾಲ್ಯಾನ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಕುರಿತಂತೆ ಮಂಗಳೂರು ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.