ಉಡುಪಿ, ಜ 16 (DaijiworldNews/SM): 150 ವರ್ಷಗಳ ಇತಿಹಾಸ ಹೊಂದಿರುವ, ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾಕ್ಷೇತ್ರದ, ಉದ್ಯಾವರ ಗ್ರಾಮದಲ್ಲಿರುವ ಸಂತ ಪ್ರಾನಿಸ್ಸ್ ಕ್ಸೇವಿಯರ್ ದೇವಾಲಯದ ಯುವ ಸಂಘಟನೆ, ಭಾರತೀಯ ಕಥೋಲಿಕ್ ಯುವ ಸಂಚಾಲನ(ಐಸಿವೈಎಂ)ಕ್ಕೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸುವರ್ಣ ಮಹೋತ್ಸವ ಸಂಭ್ರಮವನ್ನು ಐತಿಹಾಸಿಕವಾಗಿ ನಡೆಸಲು ಸಂಘಟನೆಯು ನಿರ್ಧರಿಸಿದೆ.
ಸುವರ್ಣ ಮಹೋತ್ಸವದ ಉದ್ಘಾಟನೆಯು ಜನವರಿ 19ರ ಆದಿತ್ಯವಾರ ಸಂಜೆ 5.15ಕ್ಕೆ ಉದ್ಯಾವರ ಸಂತ ಫ್ರಾನಿಸ್ಸ್ ಕ್ಸೇವಿಯರ್ ದೇವಾಲಯದ ವಠಾರದಲ್ಲಿ ಜರುಗಲಿದೆ. ಜನವರಿ 19 ರಂದು ಉದ್ಘಾಟನಾ ಸಮಾರಂಭಕ್ಕೆ ಪೂರ್ವಭಾವಿಯಾಗಿ ಸಂಜೆ 4 ಗಂಟೆಗೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಪರಮ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋರವರ ನೇತೃತ್ವದಲ್ಲಿ ಬಲಿ ಪೂಜೆ ನಡೆಯಲಿದೆ ಎಂದು ಕಾರ್ಯ ಸಂಚಾಲಕ ಸ್ಟೀವನ್ ಕುಲಾಸೊ ತಿಳಿಸಿದರು.
ಉಡುಪಿಯಲ್ಲಿ ಸುದ್ದಿಗೀಷ್ಟಿಯಲ್ಲಿ ಮಾತನಾಡಿದ ಅವರು, 'ಈ ಕಾರ್ಯಕ್ರಮವನ್ನು ಕೇಂದ್ರದ ಮಾಜಿ ಸಚಿವೆ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಮಾರ್ಗರೇಟ್ ಅಳ್ವಾ ಸುವರ್ಣ ಮಹೋತ್ಸವದ ಮತ್ತು 50 ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಲಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ವಿನಯ್ಕುಮಾರ್ ಸೊರಕೆ, ಧರ್ಮ ಪ್ರಾಂತ್ಯದ ಕುಲಪತಿ ವಂ. ಸ್ಟಾನಿ ಬಿ ಲೋಬೋ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಸ್ಥಾಪಕ ಧರ್ಮಗುರು ವಂ. ಹೆನ್ರಿ ಫೆರ್ನಾಂಡಿಸ್, ಐಸಿವೈ ಎಂ ಕರ್ನಾಟಕ ಪ್ರಾಂತೀಯ ಅಧ್ಯಕ್ಷ ಜೈಸನ್ ಪಿರೇರಾ, ಸಂಸ್ಥೆಯ ಗೌರವಧ್ಯಕ್ಷ ನೋರ್ಬಟ್ ಕ್ರಾಸ್ಟೋ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ, ಸಹಾಯಕ ಧರ್ಮಗುರು ವಂದನೀಯ ರೊಲ್ವಿನ್ಅರಾನ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದವವರನ್ನು ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದವರಿಗೆ ಗೌರವಿಸುವ ಕಾರ್ಯಕ್ರಮವಿದೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕತಿಕ ಕಾರ್ಯಕ್ರಮವಾಗಿ ಐಸಿವೈಎಂ ಸಂಘಟನೆಯ ಮಾಜಿ ಮತ್ತು ಹಾಲಿ ಸದಸ್ಯರಿಂದ ಕೊಂಕಣಿ ಹಾಸ್ಯಮಯ ನಾಟಕ "ಬೇವಾರಿಸ್" ಪ್ರದರ್ಶವಾಗಿಲಿದೆ. ನಾಟಕದ ರಚನೆಯನ್ನು ಜೋನಿ ಮರಿಯ ಭೂಮಿ, ಖ್ಯಾತ ನಿರ್ದೇಶಕ ಗಣೇಶ್ರಾವ್ಎಲ್ಲೂರು ಈ ನಾಟಕದ ನಿರ್ದೇಶನ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಧರ್ಮ ಪ್ರಾಂತ್ಯದ ಕುಲಪತಿ ಅತಿ ವಂದನೀಯ ಸ್ಟಾನಿ ಬಿ ಲೋಬೋ, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡೋರಾ ಅರೋಜಾ, ರೊನಾಲ್ಡ್ ಡಿಸನ್, ಮರ್ವಿನ್ ಡಿ ಆಲ್ಮೇಡಾ, ಐಸಿವೈಮ್ ಉಪಾದ್ಯಕ್ಷರು, ಜೆರಾಲ್ಡ್ ಪಿರೆರಾ, ಪ್ರೇಮ್ ಮಿನೇಜಸ್, ಪ್ರವೀಣ್ ಪಿಂಟೋ ಮತ್ತು ಇತರರು ಉಪಸ್ಥಿತರಿದ್ದರು.
ನಡೆದುಬಂದ ಹಾದಿ:
1971ರಲ್ಲಿ ದೇವಾಲಯದ ಸಹಾಯಕ ಧರ್ಮಗಳುಗಳಾಗಿ ಸೇವೆ ಸಲ್ಲಿಸುತ್ತಿದ್ದ ವಂ ಹೆನ್ರಿ ಫೆರ್ನಾಂಡಿಸ್ರವರು ಅಂದಿನ ಯುವಕಯುವತಿಯರನ್ನು ಒಗ್ಗೂಡಿಸಿ ಸಿವೈಎ ಎಂಬ ಹೆಸರಿನೊಂದಿಗೆ ಈ ಸಂಸ್ಥೆಯನ್ನು ಆರಂಭಿಸಿದ್ದರು. ಕಾಲಕ್ರಮೇಣ ಸಿವೈಎ ಹೆಸರು ಬದಲಾಗಿ ಐಸಿವೈಎಂ ಆಗಿ ಈ ಸಂಸ್ಥೆ ಮರು ನಾಮಕರಣವಾಗಿತ್ತು.
“ಸೇವೆಯೊಂದಿಗೆ ನಾಯಕತ್ವ” ಎಂಬ ಧ್ಯೇಯದೊಂದಿಗೆ ಈ ಸಂಸ್ಥೆ ಬೆಳೆದಿದ್ದು, ಸ್ಥಾಪಕ ಅಧ್ಯಕ್ಷರಾಗಿ ದಿ.ಜೊಯ್ ಪಿರೇರಾ ಸೇವೆ ಸಲ್ಲಿಸಿದ್ದಾರೆ. ಕಳೆದ 49 ವರ್ಷಗಳಲ್ಲಿ ವರ್ಷಂಪ್ರತಿ ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಹೊಸ ಕಾರ್ಯಕಾರಿ ಸಮಿತಿಗಳು ಆಸ್ತಿತ್ವಕ್ಕೆ ಬಂದಿದ್ದು, ಹಲವಾರು ಯುವಕ ಯುವತಿಯರು ಸಂಚಲನದ ನೇತೃತ್ವವನ್ನು ವಹಿಸಿ, ತಮ್ಮ ನಾಯಕತ್ವವನ್ನು ಮತ್ತು ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸಿದ್ದಾರೆ. ಬಡವರಿಗೆ ವೈದ್ಯಕೀಯ ಮತ್ತು ವಿದ್ಯಾರ್ಥಿಗಳಿಗೆ ಸಾಲ್ಕರ್ಶಿಪ್, ವಿವಿಧ ಆರೋಗ್ಯ ತಪಾಸಣ ಶಿಬಿರಗಳು, ನಾಯಕತ್ವದ ಮಾಹಿತಿ, ಯುವ ಸಮಾವೇಶ, ಶ್ರಮದಾನ, ಕ್ರೀಡಾಕೂಟ ಸಹಿತ ದೇವಾಲಯ ಮಾತ್ರವಲ್ಲದೇ, ಗ್ರಾಮದಲ್ಲಿಯೂ ತನ್ನ ಕೈಯಲ್ಲ್ಲಾದಷ್ಟೂ ಸಹಾಯ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸರ್ವರಿಗೂ ಸಹಕಾರಿಯಾಗಿದೆ.
ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹಲವಾರು ಯುವಕರು ಧರ್ಮಗುರುಗಳಾಗಿದ್ದು, ದೇವಾಲಯದ ಮತ್ತು ಧರ್ಮ ಪ್ರಾಂತ್ಯಕ್ಕೆ ಸಂತಸದ ವಿಷಯ. ಶ್ರೀಮಂತ ಬಡವ ಎಂಬ ಬೇದವಿಲ್ಲದೆ ಎಲ್ಲಾ ಯುವಕರು ಸಹೋದರ -ಸಹೋದರಿಯಂತೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ತಿಂಗಳಿಗೆ ಒಂದು ಕಾರ್ಯಕ್ರಮದಂತೆ ವರ್ಷಕ್ಕೆ ಕನಿಷ್ಟ 12 ಕಾರ್ಯಕ್ರಮಗಳನ್ನು ಸಂಘಟಿಸಿ ಯುವಕರಿಗೆ ನಾಯಕತ್ವದ ದಾರಿಯನ್ನು ತೋರಿಸಿದೆ. ಈ ಸಂಚಲನದಲ್ಲಿ ಸೇವೆಯಲ್ಲಿಸಿದ ಯುವಜನರು ಕೇವಲ ಉದ್ಯಾವರಕ್ಕೆ ಸೀಮಿತವಾಗಿರದೆ ವಲಯ, ಧರ್ಮ ಪ್ರಾಂತ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ನಾಯಕತ್ವವನ್ನು ಪ್ರದರ್ಶಸಿದ್ದಾರೆ.
ಪ್ರಸ್ತುತ ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ, ಧರ್ಮ ಪ್ರಾಂತ್ಯದ ಕುಲಪತಿ ಅತಿ ವಂ. ಸ್ಟಾನಿ ಬಿ ಲೋಬೊರವರ ವಿಶೇಷ ಮುತುವರ್ಜಿಯಿಂದ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳಿಗಾಗಿ, ಸುವರ್ಣ ಮಹೋತ್ಸವದ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಈ ಸಮಿತಿಯಲ್ಲಿ ಅಂದಿನ ಸಿವೈಎದಿಂದ ಇಂದಿನ ಐಸಿವೈಎಂ ವರೆಗೆ ಸೇವೆ ಸಲ್ಲಿಸಿದ ಹಲವಾರು ಹಿರಿಯ ಕಿರಿಯ ಸದಸ್ಯರಿಗೆ ಪ್ರಧಾನ ಸಮಿತಿ ಮತ್ತು ಸಹ ಸಮಿತಿಗಳಿಗೆ ಆಯ್ಕೆ ಮಾಡಲಾಗಿದೆ. ಐಸಿವೈಎಂ ಸಂಘಟನೆಯ ಮಾಜಿ ಅಧ್ಯಕ್ಷ ಪ್ರಸ್ತುತ ದೇವಾಲಯದ ಕಾರ್ಯದರ್ಶಿ ಮೈಕಲ್ ಡಿಸೋಜಾರವರನ್ನು ಅಧ್ಯಕ್ಷರನ್ನಾಗಿ, ಡೋರಾ ಅರೋಜಾರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿಲಾಗಿದೆ.