ಬೆಳ್ತಂಗಡಿ, ಜ 17 (Daijiworld News/MSP): ಮಂಗಳೂರಿನಲ್ಲಿ ಮಂಗಳವಾರ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಕುಂಬಾರ ಸಮುದಾಯದ ಅವಹೇಳನದ ಫಲಕ ಪ್ರದರ್ಶನ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರ ಸಂಘದ ಪದಾಧಿಕಾರಿಗಳು ಬುಧವಾರ ಬೆಳ್ತಂಗಡಿ ಠಾಣೆಗೆ ಮನವಿ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ವೃತ್ತಿ ಆಧಾರಿತ, ಹಲವಾರು ಚರಿತ್ರೆಗೆ ಕಾರಣವಾಗಿರುವ, ಸಾಂಸ್ಕೃತಿಕ ಪರಂಪರೆ ಸಾರಿರುವ ತನ್ನ ಕಾಯಕ ತತ್ವ ಸಿದ್ದಾಂತದಡಿ ಇತಿಹಾಸ ಸೃಷ್ಟಿಸಿರುವ ಕುಂಬಾರ ಸಮುದಾಯಕ್ಕೆ ಅವಮಾನವಾಗುವಂತೆ ಗಾದೆ ಮಾತನ್ನು ತಿರುಚಿ "ಕುಂಬಾರನಿಗೆ ವರ್ಷ-ಹರ್ಷನಿಗೆ ನಿಮಿಷ" ಎಂಬ ಬರವಣಿಗೆಯುಳ್ಳ ಪೋಸ್ಟರ್ನ್ನು ಪ್ರದರ್ಶಿಸಿ, ಸಮುದಾಯವನ್ನು ಅಪಮಾನಿಸಲಾಗಿದೆ. ಪ್ರತಿಭಟನೆ ಮಾಡಿದ ಸಂಘಟಕರ ಹಾಗೂ ಭಿತ್ತಿಪತ್ರ(ಪೋಸ್ಟರ್) ಪ್ರದರ್ಶಿಸಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ಬೆಳ್ತಂಗಡಿ ಪೋಲಿಸ್ ಠಾಣಾಧಿಕಾರಿಯವರ ಮೂಲಕ ಮನವಿ ನೀಡಿ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಹರೀಶ ಕಾರಿಂಜ, ಕಾರ್ಯದರ್ಶಿ ಸಂತೋಷ್ ಭಾರ್ಗವಿ ಹಾಗೂ ಪದಾಧಿಕಾರಿಗಳು ಇದ್ದರು.