ಉಪ್ಪಿನಂಗಡಿ, ಜ.17 (Daijiworld News/PY) : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಎಂಬಲ್ಲಿ ಕೋಳಿ ಸಾಗಾಟದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಈಚರ್ ಲಾರಿಯೊಂದು ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭ ಪೆರ್ನೆ ಸಮೀಪದ ದೋರ್ಮೆ ಮಸೀದಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆಯಲ್ಲಿ ಈಚರ್ ಲಾರಿ ನಜ್ಜುಗುಜ್ಜಾಗಿದ್ದು, ಲಾರಿಯಲ್ಲಿದ್ದ ಸುಮಾರು 200ಕ್ಕೂ ಅಧಿಕ ಕೋಳಿಗಳು ಸಾವಿಗೀಡಾಗಿದ್ದು, ಉಳಿದ ಕೋಳಿಗಳನ್ನು ಬೇರೆ ವಾಹನದ ಮೂಲಕ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.