ಮಂಗಳೂರು ಜ 29: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಮತದಾರ ಓಲೈಸಲು ವಿವಿಧ ಕಸರತ್ತು ನಡೆಸುವುದು ಸಾಮಾನ್ಯ. ಇದೀಗ ಸಚಿವ ಯುಟಿ ಖಾದರ್ ಕೊರಗಜ್ಜನ ದೈವಸ್ಥಾನಕ್ಕೆ ಹೋಗಿ ಹರಕೆ ನೀಡಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಸಚಿವರು ರಾಜಕೀಯ ಬೇಳೆ ಬೇಯಿಸಲು ಕೋಲಗಳಿಗೆ ಹೋಗಿ ಹರಕೆಯನ್ನು ನೀಡಿದ್ದು, ಮುಸ್ಲಿಂ ನಾಯಕರು ಈ ರೀತಿ ಮಾಡುವುದು ಸರಿಯಲ್ಲ ಎಂದು ಸ್ವಜಾತಿ ಬಾಂಧವರೇ ವಿಡಿಯೋವನ್ನು ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಒಟ್ನಲ್ಲಿ ಚುನಾವಣೆ ಬರುತ್ತಿದ್ದಂತೆ ಸಚಿವರ ಈ ವಿಡಿಯೋ ವೈರಲ್ ಆಗಿದ್ದು ಇದಕ್ಕೆ ಸಚಿವರೇ ಸ್ಪಷ್ಟನೆಯನ್ನು ನೀಡಬೇಕಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ಪ್ರಸಿದ್ಧ ಕೊರಗಜ್ಜನ ಕ್ಷೇತ್ರದಲ್ಲಿ ಕೊರಗಜ್ಜನಿಗೆ ನರ್ತನ ಸೇವೆ ನಡೆದಿತ್ತು. ಈ ಸಂದರ್ಭದಲ್ಲಿ ಸಚಿವ ಯುಟಿ ಖಾದರ್ ಕೂಡಾ ಭೇಟಿ ನೀಡಿದ್ದರು. ಅಲ್ಲದೇ ಸ್ವತಃ ದೈವ ಪಾತ್ರಿಯಿಂದ ಕೊರಗಜ್ಜನ ಪ್ರಸಾದವನ್ನೂ ಸ್ವೀಕರಿಸಿದ್ರು. ಕೊರಗಜ್ಜನ ಪ್ರಸಾದ ಸ್ವೀಕರಿಸಿದ ಸಚಿವ ಖಾದರ್ ವಿರುದ್ಧ ಮುಸ್ಲಿಮರಿಂದ ತೀವ್ರ ಟೀಕೆಗೆ ಒಳಗಾಗಿದ್ದರು.