ಕುಂದಾಪುರ, ಜ 17(DaijiworldNews/SM): ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮಾತಿಗೆ ಕಿಮ್ಮತ್ತಿನ ಬೆಲೆಯೂ ಕೊಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮ ಪಂಚಾಯಿತಿ ಒಂದರ ಬಿಜೆಪಿ ಬೆಂಬಲಿತ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ ಘಟನೆ ಬೈಂದೂರು ವಿಧಾನಸಭಾ ಕ್ಷೇತ್ರದ ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದಿದೆ.
ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇದ್ದ 23 ಬಿಜೆಪಿ ಬೆಂಬಲಿತ ಸದಸ್ಯರ ಪೈಕಿ ಗುರುವಾರ ೧೩ ಜನ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಬೆಂಬಲಿತ ಸದಸ್ಯರಾದ ಎನ್ ನಾಗರಾಜ ಖಾರ್ವಿ, ಬೈರು ಬಸವ, ಮಂತಿ ಶ್ರೀನಿವಾಸ್, ಪಿ.ಬಿ.ನಾಗರಾಜ ಖಾರ್ವಿ, ಅರುಣ್ ಪೂಜಾರಿ, ಲಲಿತ ಖಾರ್ವಿ, ನಿರ್ಮಲಾ ಪೂಜಾರಿ, ಸುಮಿತಾ ಶೇರುಗಾರ್, ಅಂಬಿಕ ಖಾರ್ವಿ, ರಾಜಾ ಜಿ.ಪಿ, ಸಾವಿತ್ರಿ, ಪ್ರಶಾಂತ ಖಾರ್ವಿ, ರೇಖಾ ಖಾರ್ವಿ ಎಂಬುವರೇ ರಾಜೀನಾಮೆ ಕೊಟ್ಟ ಗ್ರಾ.ಪಂ.ಸದಸ್ಯರಾಗಿದ್ದಾರೆ. ಎಲ್ಲಾ ಸದಸ್ಯರೂ ರಾಜೀನಾಮೆ ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿಯವರಿಗೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ೨೩ ಜನ ಇದ್ದು, ಶ್ರೀನಿವಾಸ ಖಾರ್ವಿ ಎಂಬುವವರು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯುವ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಆದರೆ ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟರು ಗಂಗೊಳ್ಳಿ ಗ್ರಾಮ ಪಂಚಾಯತ್ಗೆ ಯಾವುದೇ ಅನುದಾನ ತಂದಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿತ್ತು. ಈ ಬಗ್ಗೆ ಗಂಗೊಳ್ಳಿ ಪಂಚಾಯತ್ನ ಬಿಜೆಪಿ ಬೆಂಬಲಿತ ಸದಸ್ಯರು ಶಾಸಕರನ್ನು ಭೇಟಿ ಮಾಡಿ ಅಭಿವೃದ್ಧಿ ಅಹವಾಲು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿ ಆಡಳಿತವಿರುವ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಈ ಬಗ್ಗೆ ಸದಸ್ಯರ ಬೇಡಿಕೆಗಳಿಗೆ ಮನ್ನಣೆ ನೀಡದೇ ಶಾಸಕರ ಕೈಗೊಂಬೆಯಾಗಿದ್ದರೂ ಅನುದಾನ ನೀಡದೇ ಗ್ರಾಮ ಪಂಚಾಯತ್ನ ಸದಸ್ಯರನ್ನು ಕಡೆಗಣಿಸಿದ್ದಲ್ಲದೇ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಆರೋಪಗಳು ಹಿಂದಿನಿಂದಲೂ ಕೇಳಿ ಬಂದಿತ್ತು.
ಈ ಬಗ್ಗೆ ಸಂಸದರನ್ನು ಭೇಟಿ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೆಲ್ಲದರಿಂದ ರೋಸಿ ಹೋಗಿದ್ದಲ್ಲದೇ ಮತದಾರರು ಅಭಿವೃದ್ಧಿ ಬಗ್ಗೆ ಕೇಳಿದಾಗ ಮೂಕರಾಗಬೇಕಾದ ಸ್ಥಿತಿ ಬಂದೊದಗಿದೆ ಎನ್ನುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಗಂಗೊಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯ ನಾಗರಾಜ ಖಾರ್ವಿ ಹೇಳಿದ್ದಾರೆ.