ಉಡುಪಿ, ಜ.17 (Daijiworld News/PY) : ಉಡುಪಿ ಕೃಷ್ಣ ಮಠದ 250ನೇ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಜ.18 ಶನಿವಾರದಂದು ಮುಂಜಾನೆ ಅದ್ದೂರಿ ಮೆರವಣಿಗೆ ನಡೆಯಲಿದ್ದು, ಶುಭಮುಹೂರ್ತದಲ್ಲಿ ಈಶಪ್ರಿಯ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ.
ಶನಿವಾರ ಮುಂಜಾನೆ 2 ಗಂಟೆಗೆ ಮೆರವಣಿಗೆ ಆರಂಭವಾಗಲಿದ್ದು, ನೂರಕ್ಕೂ ಅಧಿಕ ಕಲಾತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಅಷ್ಟಮಠಾಧೀಶರನ್ನು ಪಲ್ಲಕ್ಕಿಯಲ್ಲಿ ಕರೆತರುವುದು ಈ ಮೆರವಣಿಗೆಯ ವಿಶೇಷ. ರಾಜಬೀದಿಯಲ್ಲಿ ಸಾಗಿಬರುವ ಮೆರವಣಿಗೆ ರಥಬೀದಿಯಲ್ಲಿ ಕೊನೆಗೊಳ್ಳುತ್ತದೆ. ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಮಾಡುವ ಸ್ವಾಮೀಜಿ ಚಂದ್ರ ಈಶ್ವರ, ಅನಂತ ಈಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. 5 ಗಂಟೆಗೆ ಕೃಷ್ಣ ಮಠ ಪ್ರವೇಶಿಸಲಿದ್ದು, 5.57ಕ್ಕೆ ಪೂಜಾಧಿಕಾರ ಹಸ್ತಾಂತರವಾಗಲಿದೆ.
ಶನಿವಾರ ಅಪರಾಹ್ನ ಯತಿಗಳ ದರ್ಬಾರು ನಡೆಯಲಿದ್ದು, ಸಚಿವರು, ಗಣ್ಯರು ಭಾಗಿಯಾಗಲಿದ್ದಾರೆ. ಇನ್ನು ಎರಡು ವರ್ಷ ಅದಮಾರು ಮಠದ ಪರ್ಯಾಯ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥರು ಕಡಗೋಲು ಕೃಷ್ಣನ ಪೂಜೆ ಮಾಡುತ್ತಾರೆ.
ಪರ್ಯಾಯ ಮಹೋತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು, ಗಣ್ಯರು ಭಾಗಿಯಾಗಲಿರುವ ಹಿನ್ನೆಲೆ 1100ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು, 300 ಹೋಮ್ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿಗೆ ಭಂಗವಾಗದಂತೆ ಕಟ್ಟೆಚ್ಚರ ವಹಿಸಲಾಗಿದ್ದು, 2 ಎಸ್ಪಿ ದರ್ಜೆಯ ಅಧಿಕಾರಿ, 8 ಡಿವೈಎಸ್ಪಿ, 23 ಇನ್ಸ್ ಪೆಕ್ಟರ್, 65 ಸಬ್ ಇನ್ಸ್ ಪೆಕ್ಟರ್ ನಿಯೋಜಿಸಲಾಗಿದೆ. ಹೆಚ್ಚಿನ ಭದ್ರತೆಗಾಗಿ 75 ಸಿಸಿಟಿವಿ ಕ್ಯಾಮಾರಗಳು, 7 ವಾಚ್ ಟವರ್ ಅಳವಡಿಸಲಾಗಿದ್ದು, ಜನ ಸಾಮಾನ್ಯರ ಅನುಕೂಲಕ್ಕಾಗಿ 3 ಹೊರ ಪೋಲಿಸ್ ವ್ಯವಸ್ಥೆ ಮಾಡಲಾಗಿದೆ.
ಪರ್ಯಾಯ ಮಹೋತ್ಸವದ ವೇಳೆ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು, ವಸ್ತುಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಮನವಿ ಮಾಡಿದ್ದಾರೆ. ಉಡುಪಿಯ ಎಲ್ಲಾ ಮಾರ್ಗಗಳಲ್ಲಿ ರಾತ್ರಿ 7 ಗಂಟೆಗೆ ವಾಹನ ನಿಷೇದ ಮಾಡಲಾಗಿದೆ ಎಂದು ಅಡಿಷನ್ ಎಸ್ಪಿ ಕುಮಾರ್ ಚಂದ್ರ ಹೇಳಿದ್ದಾರೆ.