ಬಂಟ್ವಾಳ, ಜ 17(DaijiworldNews/SM): ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಪುಚ್ಚೆಮುಗೇರು ಎಂಬಲ್ಲಿ ನಡೆದಿದೆ. ಫರಂಗಿಪೇಟೆಯ ನವಾಜ್ ಹಲ್ಲೆ ನಡೆಸಿದ ಆರೋಪಿ.
ಹಲ್ಲೆಯ ತೀವ್ರತೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಮಹೇಂದ್ರ ಎಂಬವರ ಕಾಲಿನ ಪಾದ ಮುರಿದು ಹೋಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2015ರಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣವೊಂದರ ಆರೋಪಿ ಫರಂಗಿಪೇಟೆ ಕುಂಪಣಮಜಲು ನಿವಾಸಿ ನವಾಜ್ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಸಿದ್ಧಕಟ್ಟೆ ಸಮೀಪದ ಪುಚ್ಚುಮುಗೇರು ಎಂಬಲ್ಲಿ ಆತನ ಮನೆಗೆ ತೆರಳಿದ್ದ ವೇಳೆ ಆರೋಪಿಯು ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.