ಬಂಟ್ವಾಳ ಜ 29 : ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್ ರೆಡ್ಡಿ ಜಿಲ್ಲೆಯಿಂದ ವರ್ಗಾವಣೆಗೊಂಡ ಬೆನ್ನಿಲ್ಲೇ, ಜಿಲ್ಲೆಯಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳು ಶುರುವಾಗಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಖಡಕ್ ಅಧಿಕಾರಿಯಾಗಿ ಜಿಲ್ಲೆಯಲ್ಲಿ ಶಾಂತಿ ಯನ್ನು ನೆಲೆಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದ ಅಧಿಕಾರಯನ್ನು ಕೆಲವೊಂದು ರಾಜಕೀಯ ಲಾಭಕ್ಕೋಸ್ಕರ ವರ್ಗಾವಣೆ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಕೋಮು ಗಲಭೆಯಿಂದ ನಲುಗುತ್ತಿದ್ದ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡು ಜಿಲ್ಲೆಯಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಿದ್ದರು. ಈ ಸಮಯದಲ್ಲಿ ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆ ಪ್ರಕರಣಗಳನ್ನು ಯಶ್ವಸಿಯಾಗಿ ಬೇಧಿಸಿದ್ದರು. ಜೊತೆಗೆ ಅವ್ಯಾಹತವಾಗಿ ಅಕ್ರಮವಾಗಿ ಹೊರಜಿಲ್ಲೆಗಳಿಗೆ ಹೋಗುತ್ತಿದ್ದ ಮರಳನ್ನು ಹೋಗದಂತೆ ತಡೆಹಿಡಿದಿದ್ದರು. ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಗಳನ್ನು ನಿಲ್ಲಿಸಿದ್ದರು. ಜುಗಾರಿ ಅಡ್ಡೆಗಳು ಬಂದ್ ಅಗಿದ್ದವು, ಗಾಂಜಾ ಮಾರಾಟಗಾರರಿಗೆ ಬರೆ ಎಳೆದಿದ್ದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವವರಿಗೆ ಮತ್ತು ಅಕ್ರಮ ಚಟುವಟಿಕೆ ನಡೆಸುವವರಿಗೆ ದುಸ್ವಪ್ನವಾಗಿದ್ದರು. ಇದೀಗ ಎಲ್ಲವೂ ನಿಧಾನಗತಿಯಲ್ಲಿ ಗರಿಕೆದರುತ್ತಿದೆ. ನೂತನ ಎಸ್ಪಿ ಆಗಮನದ ಬಳಿಕವಾದರೂ ಇವೆಲ್ಲದಕ್ಕೂ ಮತ್ತೇ ಬ್ರೇಕ್ ಬೀಳುತ್ತಾ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ