ಉಳ್ಳಾಲ, ಜ 17(DaijiworldNews/SM): ದೇಶವನ್ನಾಳುವ ಸರಕಾರಕ್ಕೆ ದೇಶದ ದಲಿತರು, ಬಿಲ್ಲವರು, ಬಂಟರ ಮೇಲೆ ವಿರೋಧವಿದೆ. ಶೂದ್ರ ಸಮುದಾಯ ತಮ್ಮ ಪಕ್ಕಕ್ಕೆ ಬಂತು ಅನ್ನುವ ಹೆದರಿಕೆಯಿಂದ ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಹೇಳಿದರು.
ಅವರು ಪೌರತ್ವ ಸಂರಕ್ಷಣಾ ಸಮಿತಿ ಮಂಜನಾಡಿ ವತಿಯಿಂದ ಮಂಜನಾಡಿ ಪೊಟ್ಟೋಳಿಕೆ ಮೈದಾನದಲ್ಲಿ ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ಮಸೂದೆಗಳ ವಿರುದ್ದ ಶುಕ್ರವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಸಲ್ಮಾನರು ಭಯಪಟ್ಟಿದ್ದೇವೆ ಅಂತ ಅಮಿತ್ ಷಾ ಅವರಿಗೆ ಯಾರು ಹೇಳಿದ್ದಾರೆ. ಹಿಂದೆ ದೇಶಕ್ಕೆ ಆಪತ್ತು ಬಂದಾಗ ಹೋರಾಟ ನಡೆಸಿರುವುದು ಮುಸಲ್ಮಾನರೇ ಅನ್ನುವುದನ್ನು ಗಮನದಲ್ಲಿಟ್ಟುಕೊಳ್ಳಲಿ. ಹಿಂದೂ ಅನ್ನುವುದು ಒಡೆಯುವ ಧರ್ಮ ಅಲ್ಲ, ಜೋಡಿಸುವ ಧರ್ಮವಾಗಿದೆ. ದೇಶದ ಉನ್ನತ ಬ್ರಾಹ್ಮಣರೆಂದರೆ ಚಿಟ್ಪಾವನ್ ಆಗಿರುತ್ತಾರೆ.
ಕಲ್ಲಡ್ಕ ಭಟ್ ತಾನು ಮದುವೆಯಾಗುವಾಗ ಏಳು ಸುತ್ತು ಮಾತ್ರ ಹಾಕಿರುವುದು ಅನ್ನುವುದನ್ನು ತಲೆಯಲ್ಲಿಟ್ಟುಕೊಳ್ಳಲಿ. ಅದನ್ನು ಹೊರತುಪಡಿಸಿ ಯಾವುದೇ ದಾಖಲೆಗಳನ್ನು ತಯಾರಿಸಿಲ್ಲ, ಅನ್ನುವುದು ತಲೆಯಲ್ಲಿರಲಿ. ಶೃಂಗೇರಿ ಕ್ಷೇತ್ರವನ್ನು ಉಳಿಸಿದ ಟಿಪ್ಪು ಸುಲ್ತಾನನ ಸ್ಮರಣೆಯಾಗಿ ಈಗಲೂ ಕ್ಷೇತ್ರದಲ್ಲಿ ಸಲಾಂ ಆರತಿ ನಡೆಯುತ್ತಾ ಇದೆ. ಮುಸ್ಲಿಂ ಸಮುದಾಯವನ್ನು ಒಂದುಗೂಡಿಸುವ ಮೂಲಕ ಕಳೆದ 70 ವರ್ಷಗಳಲ್ಲಿ ಆಗದ ಸ್ಥಿತಿಯನ್ನು ಮೋದಿ ಮತ್ತು ಷಾ ಕಳೆದ ಮೂರು ತಿಂಗಳಲ್ಲಿ ನಡೆಸಿರುವುದು ಅಭಿನಂದನೀಯ.
ತನ್ನನ್ನು ಮುಸ್ಲಿಂ ನಾಯಕನೆಂದು ಎಲ್ಲಿಯೂ ಬಣ್ಣಿಸದಿರಿ. ತಾನೊಬ್ಬ ರಾಷ್ಟ್ರನಾಯಕ. ಈ ಹಿಂದೆ ಅಡ್ವಾಣಿಯವರು ಮುಸ್ಲಿಮರ ಮತಾಂತರದ ವಿರುದ್ಧ ದನಿ ಎತ್ತಿದಾಗ, ತಮ್ಮ ಸಮುದಾಯದಲ್ಲಿ ಹುಟ್ಟಿಸಿದವರನ್ನೇ ನೋಡಲು ಸಾಧ್ಯವಿಲ್ಲ, ಇನ್ನು ಹೊರಗಿನವರು ಯಾಕೆ?. ತನಗೇ 11 ಮಕ್ಕಳಿದ್ದಾರೆ ಎಂದು ಲೇವಡಿಯಾಡಿದ್ದರು. 800 ವರ್ಷ ದೇಶವನ್ನು ಮುಸಲ್ಮಾನರು ಆಳಿದರೂ, ಸಮುದಾಯದ ಸಂಖ್ಯೆ ಕೇವಲ 30 ಕೋಟಿ ಮಾತ್ರ ಇದ್ದಾರೆ. ಪ್ರಧಾನಿ ಮೋದಿ ಕೈಯಲ್ಲಿ ದೇಶವನ್ನು ಕೊಟ್ಟು, ಹುಚ್ಚನ ಕೈಯಲ್ಲಿ ಷೇವಿಂಗ್ ಸೆಟ್ ಕೊಟ್ಟಂತಾಗಿದೆ. ಎಲ್ಲಿ ಕುತ್ತಿಗೆಗೆ ಚೂರಿ ಹಾಕುವನೋ? ಅಥವಾ ಗಡ್ಡ ತೆಗೆಯುವನೋ ಅನ್ನುವ ಭಯ ಕಾಡುವಂತಾಗಿದೆ. ಇಸ್ಲಾಂ ಹೋರಾಟ ಆಗುತ್ತಿದ್ದಲ್ಲಿ ಹಸಿರು ಧ್ವಜ ಆಗುತ್ತಿತ್ತು. ದೇಶದ ಹೋರಾಟ ಆಗುವುದರಿಂದ ರಾಷ್ಟ್ರ ಧ್ವಜ ಹಿಡಿದುಕೊಂಡಿದ್ದೇವೆ. ಮೆರವಣಿಗೆಗೆ ಎಲ್ಲಾ ಸಮಾಜದವರನ್ನು ಕರೆಯಬೇಕಿದೆ ಎಂದರು.
'ತ್ರಿವರ್ಣ ಧ್ವಜ ಕೆಳಗಿಳಿಯದಿರಲಿ'
ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಕೇಂದ್ರ ಸರಕಾರದ ಮೋದಿ ಮತ್ತು ಷಾ ಹಿಟ್ಲರ್ ಸಂತಾನದವರು. ದೇಶ ಇಬ್ಭಾಗ ಮಾಡುವ ಮೂಲಕ ರಾಜಕೀಯ ಲೆಕ್ಕಾಚಾರ ಮಾಡಲು ಹೊರಟಿರುವವರ ವಿರುದ್ಧ ದೇಶ ಉಳಿಸುವ ಹೋರಾಟ ಆಗಬೇಕಿದೆ. ಅಲ್ಲಿನವರೆಗೆ ತ್ರಿವರ್ಣ ಧ್ವಜ ಕೆಳಗೆ ಇಳಿಯಬಾರದು ಎಂದರು.
'ಕೇಂದ್ರ ಗೃಹಸಚಿವ ರಾಜೀನಾಮೆವರೆಗೆ ಹೋರಾಟ':
ಶಾಸಕ ಯು.ಟಿ ಖಾದರ್ ಮಾತನಾಡಿ ದೇಶಾದ್ಯಂತ ಗೊಂದಲದ ವಾತಾವರಣ ಸೃಷ್ಟಿಸಿ ಹಲವು ಅಮಾಯಕ ಜೀವಗಳ ಬಲಿಗೆ ಕಾರಣವಾದ ಕೇಂದ್ರ ಗೃಹ ಸಚಿವ ರಾಜೀನಾಮೆ ಕೊಡುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ. ಬಿಜೆಪಿಯವರದ್ದು ಬಾಯಲ್ಲಿ ಸ್ವದೇಶಿ, ಕೆಲಸದಲ್ಲಿ ವಿದೇಶಿ. ತಾಕತ್ತಿದ್ದರೆ ಪಕ್ಷದ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ. ಎನ್ ಆರ್ ಸಿ, ಸಿಎಎ ವಿರುದ್ಧ ಜನ ಹೆದರಿಕೊಂಡು ಪ್ರತಿಭಟನೆ ಹಮ್ಮಿಕೊಂಡಿಲ್ಲ. ಬದಲಾಗಿ ದೇಶದ ಸಂವಿಧಾನ ತೋರಿಸುವ ಸಲುವಾಗಿ ಸೇರುತ್ತಿದ್ದೇವೆ. ಎಲ್ಲರೂ ಒಂದೇ ಅನ್ನುವ ಸಂದೇಶ ಸಾರಲು ಹೊರಟಿದ್ದೇವೆ ಎಂದರು.