ಉಡುಪಿ, ಜ 18 (Daijiworld/MB) : ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಓರ್ವನ ಸಾವಿಗೆ ಕಾರಣನಾದ ಚಾಲಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಕೊಯಮತ್ತೂರಿನ ಸುರೇಶ್ ಎಂಬಾತ 2014 ರ ಜನವರಿ 3ರ ಬೆಳಿಗ್ಗೆ ಅಂಬಲಪಾಡಿ ಜಂಕ್ಷನ್ ಕಡೆಯಿಂದ ಕಿನ್ನಮೂಲ್ಕಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಲಾರಿಯನ್ನು ಚಲಾಯಿಸಿದ್ದು ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮದಿಂದಾಗಿ ಬೈಕ್ನಲ್ಲಿದ್ದ ಕೆಮ್ತೂರಿನ ನಿವಾಸಿ ದಿನೇಶ್ ಪೂಜಾರಿ ಹಾಗೂ ಸದಾಶಿವ ಪೂಜಾರಿ ರಸ್ತೆಗೆ ಬಿದಿದ್ದು ಈ ಪೈಕಿ ಹಿಂಬದಿ ಸವಾರನಾಗಿದ್ದ ಸದಾಶಿವ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯು ನಡೆದಿದ್ದು ಆರೋಪಿ ದೋಷಿ ಎಂದು ಸಾಬೀತಾಗಿದೆ. ನ್ಯಾಯಾಲಯವು ಅಪರಾಧಿಗೆ 1 ವರ್ಷ 5 ತಿಂಗಳು ಶಿಕ್ಷೆ ಹಾಗೂ3,000 ರೂಪಾಯಿ ದಂಡ ವಿಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣೆಯ ಆಗಿನ ಸಿಐ ಮಾರುತಿ ಜಿ.ನಾಯ್ಡು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಕಾನೂನು ಅಧಿಕಾರಿ (ಕಿರಿಯ) ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.