ನಿತ್ಯಾನಂದ ಸ್ವಾಮಿಯನ್ನು ಬಂಧನಕ್ಕೊಳಪಡಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನಿತ್ಯಾನಂದ ಸ್ವಾಮೀಜಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮದುರೈ ಮಠವನ್ನು ರಕ್ಷಿಸಬೇಕು ಎಂದು ಎಂ. ಜಗತಲಪ್ರತಾಪನ್ ಎಂಬುವವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ ನ ಕಲಾಪವನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಮೂರ್ತಿ ಆರ್.ಮಾಧವನ್ ಅವರು ನಿತ್ಯಾನಂದನ ಬಂಧನಕ್ಕೆ ಆದೇಶ ಜಾರಿ ಮಾಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಅಧ್ಯಾತ್ಮ ಗುರುಗಳು ಕಾನೂನಿಗಿಂತ ದೊಡ್ಡವರೆನ್ನಲ್ಲ.‘ಈ ನ್ಯಾಯಾಲಯದಲ್ಲಿ ಕಾನೂನೇ ಮುಖ್ಯ ಎಂದ ನ್ಯಾಯಾಧೀಶರು, ಸ್ವಾಮೀಜಿಯನ್ನು ಬಂಧಿಸಲು ವಾರಂಟ್ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಇದೇ ವೇಳೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನಿತ್ಯಾನಂದನ ಶಿಷ್ಯನೊರ್ವ ನಿಬಂಧನೆಗಳಿಗೆ ವಿರುದ್ಧವಾಗಿ ಕೋರ್ಟ್ ಹಾಲ್ ಒಳಗೆ ಮೊಬೈಲ್ ಫೋನ್ ಅನ್ನು ತಂದಿದ್ದು ಅಲ್ಲದೆ ಎಸ್ಎಂಎಸ್ ಮಾಡುತ್ತಿದ್ದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿ ಸದರಿ ವ್ಯಕ್ತಿಯಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದರು. ನ್ಯಾಯಾಲಯದ ಕಲಾಪವನ್ನು ರೆಕಾರ್ಡ್ ಮಾಡಿಕೊಳ್ಳಲು ನಿಮಗೆ ಅವಕಾಶ ನೀಡಿದವರು ಯಾರು? ಕಲಾಪದ ಬಗ್ಗೆ ಯಾರಿಗೆ ನೀವು ಸಂದೇಶ ಕಳುಹಿಸುತ್ತಿದ್ದುದು? ನ್ಯಾಯಾಲಯ ಆಟದ ಮೈದಾನವೆಂದು ತಿಳಿಯಬೇಡಿ. ನಿಮ್ಮ ಆಶ್ರಮದ ವಿರುದ್ಧ ನೂರಾರು ಪ್ರಕರಣಗಳ ವಿಚಾರಣೆ ಬಾಕಿ ಇವೆ’ ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು ಎಂದು ವರದಿ ತಿಳಿಸಿದೆ.