ಮಂಗಳೂರು, ಜ 18 (Daijiworld/MB) : ಕರಾವಳಿ ಉತ್ಸವದ ಅಂಗವಾಗಿ ಪಣಂಬೂರು ಬೀಚ್ನಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವ ಶುಕ್ರವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟನೆ ಮಾಡಿದ್ದು ವರ್ಣಮಯ ಗಾಳಿಪಟಗಳು ಆಕಾಶದತ್ತ ಮುಖಮಾಡಿದೆ.
ಕರಾವಳಿ ಉತ್ಸವದ ಭಾಗವಾಗಿ ಜಿಲ್ಲಾಡಳಿತ ಆಯೋಜನೆ ಮಾಡಿರುವ ಈ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 6 ದೇಶಗಳಿಂದ 16 ಜನ ಹಾಗೂ ದೇಶೀಯ 25ಕ್ಕೂ ಅಧಿಕ ಹೆಸರಾಂತ ಗಾಳಿಪಟ ಕ್ರೀಡಾಳುಗಳು ಭಾಗವಹಿಸಿದ್ದು ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ಮಲೇಶಿಯಾ, ಇಸ್ರೇಲ್, ಇಂಡೋನೇಷ್ಯಾ, ಚೀನ ಗುಜರಾತ್, ನೆದರ್ಲ್ಯಾಂಡ್, ರಾಜಕೋಟ್, ಇಂಡಿಯಾ ಸಹಿತ ವಿವಿದೆಡೆಯಿಂದ ಗಾಳಿಪಟ ಹಾರಾಟಗಾರರು ಆಗಮಿಸಿ ವಿವಿಧ ರೀತಿಯ ಆಕರ್ಷಕ ಗಾಳಿಪಟಗಳನ್ನು ಹಾರಿಸಿದ್ದಾರೆ. ಹಾಗೆಯೇ ಯಕ್ಷಗಾನ ಹಾಗೂ ತಿರಂಗ ಗಾಳಿಪಟವು ವೀಕ್ಷಕರ ಗಮನ ಸೆಳೆದಿದೆ.
ಶುಕ್ರವಾರ ಮಧ್ಯಾಹ್ನದ ವೇಳೆ ಗಾಳಿಪಟ ಆಗಸದಲ್ಲಿ ಚಿತ್ತಾರ ಮೂಡಿಸಿದ್ದು ವಿದೇಶಿಗರಿಗಿಂತ ದಾರಾವಾಡದ ಸ್ಫರ್ದಾಳುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಡೋನೇಷ್ಯಾದ ಲೆಯನಾವತಿ, ಆಂಟನ್ಯೂಯೆಸ್ ಅವರ ಬೃಹತ್ ಆಂಜನೇಯನ ಗಾಳಿಪಟ, ನೆದರ್ಲ್ಯಾಂಡ್ ತಂಡದ ಬೃಹತ್ ಕುದುರೆ, ಗೋಲಾಕಾರದ ಗಾಲಿಪಟಗಳು ಜನರ ಗಮನ ಸೆಳೆದಿದೆ. ಈ ಗಾಳಿಪಟ ಉತ್ಸವದೊಂದಿಗೆ ಆಹಾರೋತ್ಸವ, ನೃತ್ಯ ವೈವಿಧ್ಯ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿದ್ದು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.