ಮಂಜೇಶ್ವರ, ಜ.18 (Daijiworld News/PY) : ಭಾಷಾ ಅಲ್ಪಸಂಖ್ಯಾತರ ಪ್ರದೇಶವಾಗಿರುವ ಮಂಜೇಶ್ವರ ಪ್ರದೇಶದಲ್ಲಿ ಭಾಷಾ ಅಲ್ಪಸಂಖ್ಯಾತರ ಉಪ ಕೇಂದ್ರವನ್ನು ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ತಿಳಿಸಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಂಜೇಶ್ವರ ವಲಯದ ಶಿಕ್ಷಣ ಅಭಿವೃದ್ಧಿಯನ್ನು ನನಸಾಗಿಸುವ ನಿಟ್ಟಿನಲ್ಲಿ ಪೈವಳಿಕೆಯಲ್ಲಿ ಸರಕಾರಿ ಐ.ಟಿ.ಐ. ಆರಂಭಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಗೋವಿಂದ ಪೈ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳ ಹೆಚ್ಚಳದ ಜೊತೆಗೆ ನೂತನ ತರಬೇತಿಗಳನ್ನು ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಕಾಲೇಜು ಅಧಿಕಾರಿಗಳು ನಡೆಸಿದ ಅಧ್ಯಯನ ವರದಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಸಿ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಅಬ್ದುಲ್ ಅಬ್ದುಲ್ ಅಝೀಝ್ ಹಾಜಿ, ಜಿಲ್ಲಾ ಪಂಚಾಯತ್ ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಡಿ, ಬ್ಲೋಕ್ ಪಂಚಾಯತ್ ಸದಸ್ಯರಾದ ಕೆ.ಆರ್.ಜಯಾನಂದ ಉಪಸ್ಥಿತರಿದ್ದರು.