ಬೆಳ್ತಂಗಡಿ, ಜ 30: ಬಾಲ್ಯ ವಿವಾಹವೊಂದನ್ನು ತಡೆ ಹಿಡಿದು, ಅಧಿಕಾರಿಗಳು ಅಪ್ರಾಪ್ತೆಯನ್ನು ರಕ್ಷಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆಯಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ನಿವಾಸಿಯೋರ್ವ ಪುತ್ರಿ, 15 ವರ್ಷದ ಅಪ್ರಾಪ್ತೆ ಬಾಲೆಯ ವಿವಾಹಕ್ಕೆ ಸಿದ್ದತೆಗಳನ್ನು ನಡೆಸುತ್ತಿದ್ದರು . ಈ ಕುರಿತಂತೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಇನ್ನು ಯುವಕನ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ. ಯುವಕನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಆತನಿಗೆ ಬುದ್ದಿವಾದ ಹೇಳಿದ್ದಾರೆ. ಅಲ್ಲದೆ, 18 ವರ್ಷಗಳ ಮೊದಲು ಬಾಲಕಿಯನ್ನು ವಿವಾಹವಾಗುವುದಿಲ್ಲ ಎಂದು ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಾಲಕಿಯನ್ನು ಮಕ್ಕಳ ಮತ್ತು ಕಲ್ಯಾಣ ಸಮಿತಿಗೆ ಹಾಜರುಪಡಿಸಲು ಸೂಚಿಸಲಾಗಿದೆ.