ಮಂಜೇಶ್ವರ, ಜ 19 (Daijiworld News/MB) : ನಿಗೂಢವಾಗಿ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿಯ ಮೃತದೇಹ ಶನಿವಾರ ಬೆಳಗ್ಗೆ ಪೆರುವಾಡ್ ಸಮುದ್ರ ತೀರದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
ಚಿಗುರುಪಾದೆ ನಿವಾಸಿಯಾಗಿರುವ ರೂಪ ಶ್ರೀ ಬಿ.ಕೆ (40) ಮೀಯಪದವು ವಿದ್ಯಾವರ್ಧಕ ಹೈಸ್ಕೂಲಿನ ಶಿಕ್ಷಿಕಿಯಾಗಿದ್ದು ಗುರುವಾರ ಶಾಲಗೆ ತೆರಳಿದ್ದು ಶಾಲೆಯಿಂದ ಅಪರಾಹ್ನ ರಜೆಹಾಕಿ ಪುತ್ರಿ ವ್ಯಾಸಂಗ ಮಾಡುವ ಮಂಜೇಶ್ವರದ ಶಾಲೆಯಲ್ಲಿ ಶಾಲಾ ಶುಲ್ಕ ಪಾವತಿ ಮಾಡಿ ವಾಪಾಸಗಿದ್ದರು. ಆದರೆ ಆ ಬಳಿಕ ನಾಪತ್ತೆಯಾಗಿದ್ದು ಈಗ ಅವರ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಸಮುದ್ರ ತೀರದಲ್ಲಿ ಕಂಡುಬಂದಿದೆ.
ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು ಮೃತದೇಹದಲ್ಲಿದ್ದ ಆಭರಣಗಳು ನಾಪತ್ತೆಯಾಗಿದೆ. ಮೃತದೇಹವನ್ನು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮಹಜರಿಗಾಗಿ ಕೊಂಡೊಯ್ಯಲಾಗಿದೆ.
ಶಿಕ್ಷಕಿ ನಾಪತ್ತೆಯಾದ ಹಿನ್ನಲೆಯಲ್ಲಿ ಮನೆಯವರು ಹಾಗೂ ಸಂಬಂಧಿಕರು ಹುಡುಕಾಡಿದಾಗ ಶಿಕ್ಷಕಿಯ ಸ್ಕೂಟಿ ಹೊಸಂಗಡ ಬಳಿಯ ದುರ್ಗಿಪಳ್ಳದಲ್ಲಿ ಪತ್ತೆಯಾಗಿತ್ತು. ಬಳಿಕ ಅವರ ಪತಿ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ಪ್ರಬಂಧಕ ಚಂದ್ರಶೇಖರ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿತ್ತು.
ಈ ನಡುವೆ ಶನಿವಾರ ಬೆಳಗ್ಗೆ ಪೆರುವಾರ್ ಸಮುದ್ರ ತೀರದಲ್ಲಿ ಮೀನು ಕಾರ್ಮಿಕರು ಮಹಿಳೆಯ ಮೃತದೇಹವನ್ನು ನೋಡಿದ್ದು ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಮೃತ ದೇಹದ ಬೆರಳಿನಲ್ಲಿದ್ದ ಉಂಗುರವನ್ನು ಗುರುತು ಹಿಡಿದು ರೂಪಶ್ರೀಯವರ ದೇಹವೆಂದು ಖಾತರಿ ಪಡೆಸಿದರು.
ಸಾವಿನ ನಿಗೂಢತೆಯ ಹಿನ್ನಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.